ಒಂಟಿ ವೃದ್ಧೆಗೆ ಊಟ ಬಡಿಸಿ ತಾನೂ ಉಂಡ ಜಿಲ್ಲಾಧಿಕಾರಿ

Update: 2018-04-02 14:38 GMT

ಕರೂರು, ಎ.2: ಸಣ್ಣ ಗುಡಿಸಲೊಂದರಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ 80 ವರ್ಷದ ಅಜ್ಜಿ ರಾಕಮ್ಮಲ್ ತಮ್ಮ ಮನೆಗೆ ಭೇಟಿ ನೀಡಿದ ಅತಿಥಿಯನ್ನು ಕಂಡು ಒಂದು ಕ್ಷಣ ಆಶ್ಚರ್ಯಕ್ಕೊಳಗಾಗಿದ್ದರು.

ತಮಿಳುನಾಡಿನ ಚಿನ್ನಮನಂಕೆಪಟ್ಟಿಯಲ್ಲಿರುವ ರಾಕಮ್ಮಲ್ ಮನೆಗೆ ಭೇಟಿ ನೀಡಿದ್ದು ಬೇರ್ಯಾರೂ ಅಲ್ಲ, ಕರೂರ್ ಜಿಲ್ಲಾಧಿಕಾರಿ  ಟಿ. ಅನ್ಬಳಗನ್. ರಾಕಮ್ಮಲ್ ಅವರಿಗಾಗಿ ಮನೆಯಲ್ಲಿ ತಯಾರಿಸಿದ ಊಟವನ್ನು ತಂದಿದ್ದ ಅನ್ಬಳಗನ್, ಬಾಳೆಎಲೆ ಹಾಸಿ ಅಜ್ಜಿಗೆ ಊಟ ಬಡಿಸಿದರು. ಜೊತೆಗೆ ಅವರೊಂದಿಗೆ ಕುಳಿತು ತಾನೂ ಉಂಡರು.

ತೀರಾ ಬಡತನದಿಂದ ಒಂಟಿಯಾಗಿ ವಾಸಿಸುತ್ತಿರುವ ರಾಕಮ್ಮಲ್ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಯಾರೋ ಮಾಹಿತಿ ನೀಡಿ, ಆರ್ಥಿಕ ನೆರವು ನೀಡುವಂತೆ ಕೇಳಿಕೊಂಡಿದ್ದರು. ಇದಾಗಿ ಎರಡೇ ದಿನಗಳಲ್ಲಿ ಜಿಲ್ಲಾಧಿಕಾರಿ ಅನ್ಬಳಗನ್ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ. ಇಷ್ಟೇ ಅಲ್ಲದೆ ರಾಕಮ್ಮಲ್ ಅವರಿಗೆ ಪ್ರತಿ ತಿಂಗಳು 1000 ರೂ. ಪಿಂಚಣಿ ನೀಡುವಂತೆ ಆದೇಶಿಸಿದ್ದಾರೆ.

“ವಯೋಸಹಜ ಅನಾರೋಗ್ಯದಿಂದ ಅವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂತಹವರಿಗಾಗಿಯೇ ವೃದ್ಧಾಪ್ಯ ಪಿಂಚಣಿ ಯೋಜನೆಯಿದೆ” ಎಂದು ಜಿಲ್ಲಾಧಿಕಾರಿ ಅನ್ಬಳಗನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News