ಕಾವೇರಿ ವಿವಾದ: ತ.ನಾಡಿನಲ್ಲಿ ಭುಗಿಲೆದ್ದ ಪ್ರತಿಭಟನೆ

Update: 2018-04-02 15:11 GMT

ಕೊಯಮತ್ತೂರು,ಎ.2: ಸುಪ್ರೀಂಕೋರ್ಟ್‌ನ ಫೆಬ್ರವರಿ 16ರ ಆದೇಶಕ್ಕೆ ಅನುಗುಣ ವಾಗಿ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಕೇಂದ್ರ ಸರಕಾರ ವಿಫಲ ವಾಗಿದೆಯೆಂದು ಆರೋಪಿಸಿ, ಕೊಯಮತ್ತೂರಿನಲ್ಲಿ ಸೋಮವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಡಿಎಂಕೆ ಪಕ್ಷದ ಇಬ್ಬರು ಕಾರ್ಯಕರ್ತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಮೈಮೇಲೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಡಿಎಂಕೆ ಕಾರ್ಯಕರ್ತರನ್ನು ಮುರುಗೇಶನ್ ಹಾಗೂ ಸಿಂಗೈ ಸದಾಶಿವಂ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಪಾಲಮೇಡುವಿನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ತಮ್ಮ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೂಡಲೇ ಅವನ್ನು ಬಲವಂತವಾಗಿ ಹಿಡಿದು, ಸಮೀಪ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಕಾವೇರಿ ಜಲನಿರ್ವಹಣಾ ಮಂಡಳಿ(ಸಿಎಂಬಿ)ಯನ್ನು ತಕ್ಷಣವೇ ರಚಿಸಬೇಕೆಂದು ಆಗ್ರಹಿಸಿ ರೈತರು ಹಾಗೂ ಕೆಲವು ಸಂಘಟನೆಗಳ ಕಾರ್ಯಕರ್ತರು ಕೊಯಮತ್ತೂರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕಾವೇರಿ ಜಲನಿರ್ವಹಣಾ ಮಂಡಳಿ ರಚನೆ ವಿಳಂಬವನ್ನು ಪ್ರತಿಭಟಿಸಿ ಇಂದು ತಮಿಳುನಾಡಿನಾದ್ಯಂತ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ರಸ್ತೆ ತಡೆ ನಡೆಸಿದ್ದಾರೆ. ಕೇಂದ್ರ ಸರಕಾರವು ತಕ್ಷಣವೇ ಸಿಎಂಬಿ ರಚಿಸಬೇಕೆಂದು ಆಗ್ರಹಿಸಿ, ಡಿಎಂಕೆ ನೇತೃತ್ವದ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದಾರೆ.

ಸಿಎಂಬಿ ರಚನೆಯಾಗುವವರೆಗೆ ರಾಜ್ಯದಾದ್ಯಂತ ನಿರಂತರವಾಗಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಡಿಎಂಕೆ ಘೋಷಿಸಿದೆ.

 ಸುಪ್ರೀಂಕೋರ್ಟ್ ಫೆಬ್ರವರಿ 16ರಂದು ನೀಡಿದ ತೀರ್ಪಿನಲ್ಲಿ ಕಾವೇರಿ ನದಿ ನೀರಿನಲ್ಲಿ ಕರ್ನಾಟಕದ ಪಾಲನ್ನು 270 ಟಿಎಂಸಿ ಅಡಿಗೆ ಏರಿಸಿತ್ತು ಹಾಗೂ ತಮಿಳುನಾಡಿನ ಕಾವೇರಿ ನದಿ ನೀರಿನಲ್ಲಿ ತಮಿಳುನಾಡಿನ ಪಾಲನ್ನು ಕಡಿಮೆಗೊಳಿಸಿತ್ತು.

 ತನ್ನ 465 ಪುಟಗಳ ಆದೇಶವನ್ನು ಜಾರಿಗೊಳಿಸುವುದನ್ನು ಖಾತರಿಪಡಿಸಲು ಕಾವೇರಿ ಜಲನಿರ್ವಹಣಾ ಮಂಡಳಿಯನ್ನು ರಚಿಸಲು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಆರು ವಾರಗಳ ಕಾಲಾವಕಾಶ ನೀಡಿತ್ತು. ಮಾರ್ಚ್ 29ಕ್ಕೆ ಈ ಗಡುವು ಕೊನೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News