ಶೀಘ್ರವೇ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್

Update: 2018-04-02 15:16 GMT

ಹೊಸದಿಲ್ಲಿ,ಎ.2: ಶೀಘ್ರದಲ್ಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಹಾಗೂ ಸೇವಾತೆರಿಗೆ (ಜಿಎಸ್‌ಟಿ)ಯ ವ್ಯಾಪ್ತಿಯೊಳಗೆ ತರಲಾಗುವುದೆಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ವ್ಯಕ್ತಪಡಿಸಿದ್ದಾರೆ. ಸೋಮವಾರ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು ‘‘ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಸದ್ಯದಲ್ಲೇ ಜಿಎಸ್‌ಟಿ ಚೌಕಟ್ಟಿನೊಳಗೆ ತರಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ದೇಶಾದ್ಯಂತ ಗ್ರಾಹಕರಿಗೆ ಯೋಗ್ಯ ದರದಲ್ಲಿ ತೈಲ ಉತ್ಪನ್ನಗಳು ದೊರೆಯಬೇಕಾಗಿದೆ’’ ಎಂದವರು ಅಭಿಪ್ರಾಯಿಸಿದ್ದಾರೆ.

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರಗಳ ಅಧಿಕವಾಗಿದ್ದಾಗ ದೇಶದಲ್ಲೂ ತೈಲ ದರಗಳು ಗಗನಕ್ಕೇರುತ್ತವೆ ಎಂದು ಪ್ರಧಾನ್ ಪ್ರತಿಪಾದಿಸಿದ್ದಾರೆ. ‘‘ ಪೆಟ್ರೋಲಿಯಂ ಉತ್ಪನ್ನಗಳು ಅಂತಾರಾಷ್ಟ್ರೀಯ ಸಾಮಗ್ರಿಗಳಾಗಿವೆ. ಕಚ್ಚಾ ತೈಲದ ಬೆಲೆಯೇರಿಕೆ ಯಾದಾಗಲೆಲ್ಲಾ ನಮ್ಮ ದೇಶದ ಮಾರುಕಟ್ಟೆಗೂ ಬಿಸಿಮುಟ್ಟುತ್ತದೆ. ಭಾರತವು ಗ್ರಾಹಕ ಸಂವೇದಿ ದೇಶ. ತೈಲ ಬೆಲೆಯೇರಿಕೆ ಬಗ್ಗೆ ಸರಕಾರಕ್ಕೆ ಆತಂಕವಿದೆ ಹಾಗೂ ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತವಾಗಿದ್ದೇವೆ’’ ಎಂದವರು ತಿಳಿಸಿದ್ದಾರೆ.

   ಪೆಟ್ರೋಲ್ ದರವು ರವಿವಾರ 73.73 ರೂ. ಆಗಿದ್ದು ನಾಲ್ಕು ವರ್ಷಗಳಲ್ಲೇ ಗರಿಷ್ಠ ಏರಿಕೆಯನ್ನು ಕಂಡಿದ್ದರೆ, ಡೀಸೆಲ್ ದರವು 64.58 ರೂ. ಆಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ದರವೆನಿಸಿದೆ. ಇದರಿಂದಾಗಿ ಸರಕಾರವು ಪೆಟ್ರೋಲಿಯಂ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕನ್ನು ರದ್ದುಗೊಳಿಸಬೇಕೆಂಬ ಬೇಡಿಕೆ ಇನ್ನಷ್ಟು ತೀವ್ರಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News