ಕೋಮುಗಲಭೆ: ಪ.ಬಂಗಾಳ ಸರಕಾರಕ್ಕೆ ಎನ್‌ಆಚ್‌ಆರ್‌ಸಿ ನೋಟಿಸ್

Update: 2018-04-02 16:05 GMT

ಹೊಸದಿಲ್ಲಿ,ಎ.2:  ಕೋಮುಗಲಭೆ ಪೀಡಿತ ಪಶ್ಚಿಮಬಂಗಾಳದ ರಾಣಿಗಂಜ್ ಹಾಗೂ ಅಸಾನ್‌ಸೊಲ್ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿ ತನಗೆ ವರದಿಯನ್ನು ಸಲ್ಲಿಸಬೇಕೆಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಸೋಮವಾರ ಪಶ್ಚಿಮಬಂಗಾಳ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

 ಕೋಮುಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿ ಸಮಿತಿಯೊಂದನ್ನು ರಚಿಸುವಂತೆ ಹಾಗೂ ಸ್ಥಳದಲ್ಲೇ ತನಿಖೆ ನಡೆಸುವಂತೆ ಆಯೋಗವು ಪ.ಬಂಗಾಳದ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ಕೂಡಾ ನೀಡಿದೆ.

ಮಾರ್ಚ್ 29ರಂದು ಪಶ್ಚಿಮ ಬುರ್ದವಾನ್ ಜಿಲ್ಲೆಯ ರಾಣಿಗಂಜ್ ಹಾಗೂ ಅಸನ್‌ಸೋಲ್ ನಗರಗಳಲ್ಲಿ ಕೋಮುಗಲಭೆ ಭುಗಿಲೆದ್ದಾಗ ಕೇಂದ್ರ ಸರಕಾರವು ಈ ಬಗ್ಗೆ ರಾಜ್ಯ ಸರಕಾರದಿಂದ ವರದಿಯನ್ನು ಕೇಳಿತ್ತು ಹಾಗೂ ಗಲಭೆ ನಿಯಂತ್ರಣಕ್ಕೆ ಅರೆಸೈನಿಕ ಪಡೆಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿತ್ತು. ಆದರೆ ಪ.ಬಂಗಾಳ ಸರಕಾರವು ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿತ್ತಾದರೂ, ಅರೆಸೈನಿಕ ಪಡೆಗಳ ಕೊಡುಗೆಯನ್ನು ನಿರಾಕರಿಸಿತ್ತು. ಮಾರ್ಚ್ 26ರಂದು ರಾಣಿಗಂಜ್ ಹಾಗೂ ಅಸನ್‌ಸೋಲ್ ನಗರಗಳಲ್ಲಿ ರಾಮನವಮಿ ಮೆರವಣಿಗೆಯ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ 12ಕ್ಕೂ ಅಧಿಕ ಮನೆಗಳನ್ನು ಸುಟ್ಟುಹಾಕಲಾಗಿತ್ತು ಹಾಗೂ ಅಂಗಡಿಗಳನ್ನು ಲೂಟಿಗೈಯಲಾಗಿತ್ತು.

  ರಾಣಿಗಂಜ್ ಹಾಗೂ ಅಸನ್‌ಸೋಲ್ ನಗರಗಳಲ್ಲಿ 144 ಎ ಸೆಕ್ಷನ್‌ನಡಿ ನಿಷೇಧಾಜ್ಞೆಯನ್ನು ಹೇರಲಾಗಿದ್ದರೂ, ಅಮಿತ್‌ಶಾ ನೇಮಿಸಿದ ನಾಲ್ವರು ಸದಸ್ಯರ ಬಿಜೆಪಿ ನಿಯೋಗವು ರವಿವಾರ ಗಲಭೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಗಲಭೆ ಸಂತ್ರಸ್ತರನ್ನು ಸಂದರ್ಶಿಸಿರುವ ನಿಯೋಗವು, ಈ ಬಗ್ಗೆ ಸಮಗ್ರ ವರದಿಯೊಂದನ್ನು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದೆ.

ಶನಿವಾರದಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಕೇಶವನಾಥ್ ತ್ರಿಪಾಠಿ, ಅಸನ್‌ಸೋಲ್ ಹಾಗೂ ರಾಣಿಗಂಜ್‌ನ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು ಹಾಗೂ ಸಂತ್ರಸ್ತರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು.

 ಆದಾಗ್ಯೂ ರಾಜ್ಯಪಾಲರು ತನ್ನ ನಾಲ್ಕೂವರೆ ತಾಸುಗಳ ಅವಧಿಯ ಪ್ರವಾಸದ ಸಂದರ್ಭದಲ್ಲಿ ಅಲ್ಪಸಂಖ್ಯಾತ ಪ್ರಾಬಲ್ಯದ ಪ್ರದೇಶಗಳಿಗೆ ಭೇಟಿ ನೀಡದಿರುವುದು ಭಾರೀ ವಿವಾದಕ್ಕೆ ಗ್ರಾಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News