ವೋಟರ್ ಐಡಿಗೆ ಆಧಾರ್ ಜೋಡಣೆ ಬೇಡ: ಸಚಿವ ರವಿಶಂಕರ್ ಪ್ರಸಾದ್

Update: 2018-04-02 17:04 GMT

ಹೊಸದಿಲ್ಲಿ, ಎ.2: ಆಧಾರ್ ಸಂಖ್ಯೆಯನ್ನು ಮತದಾರರ ಗುರುತುಚೀಟಿಯ ಜೊತೆ ಲಿಂಕ್ ಮಾಡುವುದಕ್ಕೆ ತನಗೆ ವೈಯಕ್ತಿಕವಾಗಿ ಒಲವಿಲ್ಲವೆಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿಶಂಕರ್ ತಿಳಿಸಿದ್ದಾರೆ.

 ಆಧಾರ್ ಸಂಖ್ಯೆ ಹಾಗೂ ಮತದಾರರ ಗುರುತು ಚೀಟಿ ವಿಭಿನ್ನ ಉದ್ದೇಶಗಳಿಗಾಗಿ ಇರುವುದರಿಂದ ಅವುಗಳನ್ನು ಪರಸ್ಪರ ಜೋಡಿಸುವುದನ್ನು ತಾನು ಬಯಸುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ರವಿಶಂಕರ್ ಪ್ರಸಾದ್ ಅವರು ರವಿವಾರ ಹೊಸದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಆಧಾರ್ ಸಂಖ್ಯೆಯನ್ನು ಮತದಾರರ ಗುರುತುಚೀಟಿ ಜೊತೆ ಜೋಡಿಸಬಾರದೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ ಇದನ್ನು ನಾನು ಮಾಹಿತಿ ತಂತ್ರಜ್ಞಾನ ಸಚಿವನೆಂಬ ನೆಲೆಯಲ್ಲಿ ನಾನು ಈ ಮಾತನ್ನು ಹೇಳುತ್ತಿಲ್ಲ. ಎಂದರು.

ಒಂದು ವೇಳೆ ನಾವು ಆಧಾರ್‌ನ್ನು ಮತದಾರರ ಗುರುತುಚೀಟಿ ಜೊತೆ ಲಿಂಕ್ ಮಾಡಿದಲ್ಲಿ, ನಮ್ಮ ಟೀಕಾಕಾರರು ‘‘ ಪ್ರಧಾನಿ ನರೇಂದ್ರ ಮೋದಿ ನಾವು ಏನನ್ನು ತಿನ್ನುತ್ತೇವೆ ಹಾಗೂ ಯಾವ ಸಿನೆಮಾ ನೋಡುತ್ತಿದ್ದೇವೆ ಎಂಬ ಬಗ್ಗೆ ಬೇಹುಗಾರಿಕೆ ನಡೆಸುತ್ತಿದ್ದಾರೆಂದು ದೂರಲಿದ್ದಾರೆ. ಅದನ್ನು ನಾನು ಬಯಸುವುದಿಲ್ಲ’’ ಎಂದು ಸಚಿವರು ವ್ಯಂಗ್ಯವಾಡಿದರು.

        ‘‘ ಆಧಾರ್ ಹಾಗೂ ಮತದಾರರು ಗುರುತು ಚೀಟಿ ಎರಡೂ ವಿಭಿನ್ನ ವಲಯಗಳಲ್ಲಿ ಕಾರ್ಯಾಚರಿಸುತ್ತವೆ. ನೀವು ಮತಚಲಾಯಿಸಲು ಹೋದಾಗ ಆಧಾರ್ ಕಾರ್ಡ್‌ಪ್ರದರ್ಶಿಸಿದಲ್ಲಿ ನಿಮಗೆ ಮತಹಾಕಲು ಸಾಧ್ಯವಿಲ್ಲ. ಆಗ ನೀವು ಮತದಾರರ ಗುರುತುಚೀಟಿ ತೋರಿಸುವುದು ಅಗತ್ಯವಾಗಿರುತ್ತದೆ’’ ಎಂದು ರವಿಶಂಕರ್ ಹೇಳಿದರು.

ಮತದಾರರು ಗುರುತುಚೀಟಿ (ಎಪಿಕ್)ಗಳನ್ನು ಈಗ ಚುನಾವಣಾ ಆಯೋಗದ ವೆಬ್‌ಸೈಟ್ ಜೊತೆ ಸಂಪರ್ಕಿಸಲಾಗಿದ್ದು, ಇದು ಮತದಾರರಿಗೆ ಮತಗಟ್ಟೆಯ ವಿವರಗಳು ಸೇರಿದಂತೆ ಮತದಾನದ ಸಮಗ್ರ ಮಾಹಿತಿಯನ್ನು ಪಡೆಯಲು ನೆರವಾಗಲಿದೆಯೆಂದು ಪ್ರಸಾದ್ ಹೇಳಿದರು.

 ಆದಾಗ್ಯೂ ಐಟಿ ಸಚಿವರು ಬ್ಯಾಂಕ್ ಖಾತೆಗಳನ್ನು ಆಧಾರ್ ಸಂಖ್ಯೆ ಜೊತೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿರುವುದನ್ನು ಬೆಂಬಲಿಸಿದ್ದಾರೆ. ಇದರಿಂದಾಗಿ ವಿವಿಧ ಸಮಾಜಕಲ್ಯಾಣ ಕಾರ್ಯಕ್ರಮಗಳನ್ನು ಸವಲತ್ತುಗನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಬಹುದಾಗಿದೆಯೆಂದವರು ಹೇಳಿದ್ದಾರೆ.

  ಮೋದಿಯವರ ಆಧಾರ್‌ಗೂ ಹಾಗೂ ಮನಮೋಹನ್‌ಸಿಂಗ್ ಅವರ ಆಧಾರ್‌ಗೂ ವ್ಯತ್ಯಾಸವಿದೆ. ಮನಮೋಹನ್‌ಸಿಂಗ್‌ರ ಆಧಾರ್‌ಗೆ ಕಾನೂನು ಬೆಂಬಲವಿರಲಿಲ್ಲ. ಆದರೆ ಮೋದಿಯವರ ಆಧಾರ್ ಕಾನೂನಿನ ಬೆಂಬಲ ಹೊಂದಿದೆ ಹಾಗೂ ಅದರ ಸುರಕ್ಷತೆ ಹಾಗೂ ಖಾಸಗಿತನವು ಖಾತರಿಪಡಿಸಲ್ಪಟ್ಟಿದೆಯೆಂದು ರವಿಶಂಕರ್ ತಿಳಿಸಿದರು. ದೇಶಾದ್ಯಂತ 80 ಕೋಟಿಗೂ ಅಧಿಕ ಮೊಬೈಲ್ ಸಂಖ್ಯೆಗಳನ್ನು ಬ್ಯಾಂಕ್ ಖಾತೆಗಳ ಜೊತೆ ಜೋಡಿಸಲಾಗಿದೆ ಹಾಗೂ 120 ಕೋಟಿಗೂ ಅಧಿಕ ಮೊಬೈಲ್ ಫೋನ್‌ಗಳು ಆಧಾರ್ ಜೊತೆ ಲಿಂಕ್ ಹೊಂದಿವೆಯೆಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News