×
Ad

ಸಿಬಿಎಸ್‌ಇ ಹೊಸ ವ್ಯವಸ್ಥೆ: ತಡವಾಗಿ ಆರಂಭಗೊಂಡ ಪರೀಕ್ಷೆ

Update: 2018-04-02 22:38 IST

ಹೊಸದಿಲ್ಲಿ, ಎ.2: ಪ್ರಶ್ನೆ ಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಶಾಲೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಗೂಡಲಿಪಿ (ಎನ್‌ಕ್ರಿಪ್ಟಡ್) ಮೂಲಕ ಇಮೇಲ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಸೋಮವಾರ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಕೆಲವು ಶಾಲೆಗಳಲ್ಲಿ ಸಿಬಿಎಸ್‌ಇ ಪರೀಕ್ಷೆಯು ವಿಳಂಬವಾಗಿ ಆರಂಭಗೊಂಡಿದೆ.

  ಆದರೆ ಗೂಢಲಿಪಿ ಮೂಲಕ ಇಮೇಲ್ ಮಾಡಲಾದ ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿ ಮುದ್ರಿಸುವಲ್ಲಿ ತಮ್ಮ ಅಸಾಮರ್ಥ್ಯವನ್ನು ಶಾಲಾಡಳಿತಗಳು ವ್ಯಕ್ತಪಡಿಸಿವೆ. ಆದರೆ ಪರೀಕ್ಷೆ ಆರಂಭದಲ್ಲಿ ಉಂಟಾಗುವ ವಿಳಂಬವು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೆಂದು ಭರವಸೆ ನೀಡಿರುವ ಸಿಬಿಎಸ್‌ಇ ಮಂಡಳಿಯು, ಪರೀಕ್ಷೆಯನ್ನು ಬರೆಯಲು ಹೆಚ್ಚುವರಿ ಸಮಯವಕಾಶ ನೀಡುವುದಾಗಿ ತಿಳಿಸಿದೆ.

ಸಿಬಿಎಸ್‌ಇನ ಅರ್ಥಶಾಸ್ತ್ರ ಹಾಗೂ ಗಣಿತ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು, ಇನ್ನು ಮುಂದೆ ಪ್ರಶ್ನೆಪತ್ರಿಕೆಗಳ ಗೂಢಲಿಪಿಯ ಪ್ರತಿಯನ್ನು ಇಮೇಲ್ ಮೂಲಕ ಕಳುಹಿಸಲಿದೆ. ಶಾಲೆಗಳು ಪ್ರಶ್ನೆಪತ್ರಿಕೆಗಳ ಇಮೇಲ್ ಲಿಂಕ್ ಪಡೆಯಲಿದ್ದು, ಅವು ಈ ಉದ್ದೇಶಕ್ಕಾಗಿಯೇ ಕಳುಹಿಸಲಾದ ಪಾಸ್‌ವರ್ಡ್‌ಗಳನ್ನು ಬಳಸಿಕೊಂಡು ಲಾಗ್ ಇನ್ ಮಾಡಲಿದೆ. ಇಂದು ಬೆಳಗ್ಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 10:15ರವರೆಗೆ ಅಂದರೆ ಪರೀಕ್ಷೆ ಆರಂಭವಾಗುವ 15 ನಿಮಿಷ ಮೊದಲು, ತೀವ್ರ ಕಣ್ಗಾವಲಿನಡಿ 2 ಸಾವಿರಕ್ಕೂ ಅಧಿಕ ಪ್ರಶ್ನೆಪತ್ರಿಕೆಗಳ ಹಾಳೆಗಳನ್ನು ಮುದ್ರಿಸಲಾಯಿತು. ಆದಾಗ್ಯೂ ಈ ಪ್ರಕ್ರಿಯೆ ಹಲವಾರು ಶಾಲೆಗಳಲ್ಲಿ ವಿಳಂಬಗೊಂಡಿತು.

ಪರಿಸ್ಥಿತಿಯನ್ನು ಅವಗಾಹನೆಗಾಗಿ ನಾವು ಎಲ್ಲಾ ಪ್ರಾದೇಶಿಕ ಕಚೇರಿಗಳನ್ನು ಸಂಪರ್ಕಿಸಿದ್ದೇವೆ. ಯಾವುದೇ ಪರಿಸ್ಥಿತಿಯಲ್ಲೂ ಪರೀಕ್ಷೆ ತಡವಾಗಿ ಆರಂಭೊಂಡಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಕಾಲಾವಕಾಶ ನೀಡುವುದು ಸಾಮಾನ್ಯ ಪದ್ಧತಿಯಾಗಿದೆ’’ ಎಂದು ಹಿರಿಯ ಸಿಬಿಎಸ್‌ಇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಸೋಮವಾರ ಸಿಬಿಎಸ್‌ಇನ 10ನೇ ತರಗತಿಯ ವಿದ್ಯಾರ್ಥಿಗಳು ಸಂಸ್ಕೃತ, ಉರ್ದು ಹಾಗೂ ಫ್ರೆಂಚ್ ಸೇರಿದಂತೆ ವಿವಿಧ ಭಾಷಾ ಪರೀಕ್ಷೆಗಳನ್ನು ಬರೆದಿದ್ದಾರೆ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳು ಇಂದು ಹಿಂದಿ ಪರೀಕ್ಷೆಗೆ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News