ಪತ್ರಿಕೆ ಸೋರಿಕೆ ಪ್ರಕರಣ: ಕೇಂದ್ರ, ಸಿಬಿಎಸ್‌ಇ ಬಳಿ ವರದಿ ಕೇಳಿದ ಮಾನವ ಹಕ್ಕು ಆಯೋಗ

Update: 2018-04-02 17:34 GMT

ಹೊಸದಿಲ್ಲಿ, ಎ.2: ಎರಡು ವಿಷಯಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ವಿಷಯಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಾನವ ಸಂಪನ್ಮೂಲ ಸಚಿವಾಲಯ, ಸಿಬಿಎಸ್‌ಇ ಮತ್ತು ದಿಲ್ಲಿ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದು ನಾಲ್ಕು ವಾರಗಳೊಳಗೆ ಸಂಪೂರ್ಣ ವರದಿಯನ್ನು ನೀಡುವಂತೆ ಸೂಚಿಸಿದೆ.

ಇಂಥ ಘಟನೆಗಳು ವಿದ್ಯಾರ್ಥಿಗಳು ಸಂಪೂರ್ಣವಾಗಿ ನಂಬಿಕೆಯಿಟ್ಟಿರುವ ಸಂಸ್ಥೆಗಳ ವಿಶ್ವಾಸಾರ್ಹತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಆಯೋಗವು ತಿಳಿಸಿದೆ. ಈ ನೋಟಿಸ್‌ಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಮುಖ್ಯಸ್ಥರು ಹಾಗೂ ದಿಲ್ಲಿ ಪೊಲೀಸ್ ಆಯುಕ್ತರಿಗೆ ಕಳುಹಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಸೋರಿಕೆಯಿಂದ ಭಾದಿತರಾಗಿರುವ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಲು ಮತ್ತು ಇಂಥ ಕಹಿಘಟನೆಗಳು ಭವಿಷ್ಯದಲ್ಲಿ ನಡೆಯದಿರುವಂತೆ ತಡೆಯಲು ಪರೀಕ್ಷೆಗಳನ್ನು ನಡೆಸುವ ಪ್ರಕ್ರಿಯೆಯನ್ನು ವಿಶ್ವಾಸಾರ್ಹ ಮತ್ತು ಅಭಾದಿತವನ್ನಾಗಿ ಮಾಡಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾನವ ಸಂಪನ್ಮೂಲ ಸಚಿವಾಲಯವು ಮಾಹಿತಿ ನೀಡಲಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಮೇಲ್ಮಟ್ಟಕ್ಕೆ ಕಾಣುವಂತೆ, ಸಂಬಂಧಿತ ಇಲಾಖೆಗಳು ವಿದ್ಯಾರ್ಥಿಗಳ ನಂಬಿಕೆಯನ್ನು ಉಳಿಸುವಲ್ಲಿ ವಿಫಲವಾಗಿವೆ ಎಂಬುದು ತಿಳಿಯುತ್ತದೆ. ಮುಗ್ಧ ವಿದ್ಯಾರ್ಥಿಗಳು ಎದುರಿಸಿದ ಸಂಕಷ್ಟವು ಅವರ ಘನತೆ ಮತ್ತು ಶಿಕ್ಷಣದ ಹಕ್ಕಿನ ಉಲ್ಲಂಘನೆಗೆ ಸಮವಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News