ಹಾಳು ಮೊರಡಿಗಳಲ್ಲಿ

Update: 2018-04-02 18:34 GMT

ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ,
ಕೆರೆ ಬಾವಿ ಹೂಗಿಡ ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ ಚೌಪಥ ಪಟ್ಟಣ ಪ್ರವೇಶದಲ್ಲಿ,
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣತಿ,
ಕುಮಾರಿ, ಕೊಡಗೂಸು ಎಂಬುವರ ಹಿಡಿದುಂಬ, ತಿರಿದುಂಬ
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರಬೆಂತರ
ಕಾಳಯ್ಯ, ಧೂಳಯ್ಯ, ಮಾಳಯ್ಯ, ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವಂಗೆ ಶರಣೆಂಬುದೊಂದು ದಡಿ ಸಾಲದೆ?

                                                                                 -ಬಸವಣ್ಣ

ಹಾಳುಬಿದ್ದ ಮಡ್ಡಿಭೂಮಿಯಲ್ಲಿ, ಹಾದಿಬೀದಿಗಳಲ್ಲಿ ಕೆರೆದಂಡೆಯಲ್ಲಿ, ಬಾವಿಯ ಮೆಟ್ಟಿಲುಗಳ ಪಕ್ಕ, ಬನ್ನಿ, ಬೇವು ಮುಂತಾದ ಗಿಡಗಳಲ್ಲಿ, ದೊಡ್ಡದೊಡ್ಡ ಆಲದ ಮರಗಳಲ್ಲಿ, ಗ್ರಾಮದ ಮಧ್ಯಭಾಗದಲ್ಲಿ, ನಾಲ್ಕುಪಥ ಗಳುಳ್ಳ ಪಟ್ಟಣದ ಪ್ರವೇಶ ಸ್ಥಳದಲ್ಲಿ ಈ ಕ್ಷುದ್ರದೇವತೆಗಳು ಬೀಡುಬಿಟ್ಟಿರುತ್ತವೆ. ಇವು ಹಾಲು ಕರೆಯುವ ಎಮ್ಮೆಗಳಿಗೆ, ಹಸುಗೂಸುಗಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಬಾಲಕಿಯರಿಗೆ ಮತ್ತು ಕನ್ಯೆಯರಿಗೆ ಕಾಡುತ್ತವೆ. ಜನ ಇಂಥ ಮೂಢನಂಬಿಕೆಯಿಂದಾಗಿ ದುರ್ಬಲ ಮನಸ್ಸಿನವರಾಗುತ್ತಾರೆ. ಅವರ ಮನಸ್ಸಿನಲ್ಲಿ ಕಾಡುವ ಈ ದೈವಗಳು ಭಯವನ್ನು ಸೃಷ್ಟಿಸುತ್ತಲೇ ಇರುತ್ತವೆ. ಜನ ಅಂಜಿ ಈ ದೈವಗಳಿಗೆ ಹರಕೆ ಹೊರುತ್ತಾರೆ, ಸಾಲ ಮಾಡಿ ಹರಕೆ ತೀರಿಸುತ್ತಾರೆ. ಆ ಸಾಲ ತೀರಿಸಲು ಒದ್ದಾಡುತ್ತಾರೆ. ಹೀಗೆ ಬಡವರ ಬದುಕು ದುಃಖದ ಚಕ್ರದಲ್ಲಿ ಸಿಲುಕುತ್ತದೆ. ಹೀಗಾಗಿ ಅನೇಕರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ. ಎಲ್ಲೆಂದರಲ್ಲಿ ಕಂಡುಬರುವ ಈ ದೇವತೆಗಳು ಜನರನ್ನು ಮೌಢ್ಯದ ಕಡೆಗೆ ಒಯ್ಯುತ್ತವೆ. ಬದುಕನ್ನು ದುಸ್ತರಗೊಳಿಸುತ್ತವೆ. ಈ ದೇವರುಗಳಿಗೆ ಬೆಳ್ಳಿಪಾದುಕೆ, ಬೆಳ್ಳಿತೊಟ್ಟಿಲು, ಬಂಗಾರದ ಕಣ್ಣು, ಹಿತ್ತಾಳೆಯ ಪ್ರಭಾವಳಿ, ಸೀರೆ ಮುಂತಾದ ಬಟ್ಟೆಬರೆ, ಕೋಳಿ, ಕುರಿ, ಕೋಣ ಬೇಕು. ಬಡವರನ್ನು ಕಾಡಿಬೇಡಿ ಹಿಡಿದು ತಿನ್ನುವ ಮತ್ತು ಯಾಚಿಸಿ ತಿನ್ನುವ ಈ ದೇವರುಗಳನ್ನು ಬಸವಣ್ಣನವರು ತಿರಸ್ಕರಿಸುತ್ತಾರೆ. ಸೃಷ್ಟಿಕರ್ತನ ಸೃಷ್ಟಿಯೇ ದೇವರಾಗಲು ಸಾಧ್ಯವಿಲ್ಲ. ಇನ್ನು ಸೃಷ್ಟಿಕರ್ತನ ಸೃಷ್ಟಿಯ ಮಕ್ಕಳಾದ ದೈವಗಳು ಅದು ಹೇಗೆ ದೇವರಾಗುತ್ತವೆ? ನಿರಾಕಾರ ಸೃಷ್ಟಿಕರ್ತನನ್ನು ಹೊರತುಪಡಿಸಿ ಉಳಿದೆಲ್ಲ ದೇವರುಗಳು ಕಲ್ಲು, ಮಣ್ಣು ಮತ್ತು ಲೋಹಗಳಿಗೆ ಜನಿಸಿದವುಗಳಾಗಿವೆ. ಹೀಗೆ ಜನರು ಸತ್ಯವನ್ನು ಅರ್ಥೈಸಿಕೊಂಡು ಪ್ರಜ್ಞಾವಂತರಾಗಿ ಬಾಳಬೇಕೆನ್ನುತ್ತಾರೆ. ಕ್ಷುದ್ರ ದೇವತೆಗಳಿಂದಾಗಿ ಜನಸಾಮಾನ್ಯರು ಬಸವಳಿದದ್ದನ್ನು ಬಸವಣ್ಣನವರು ನೋಡಿದ್ದಾರೆ. ಅವರ ವಿಮೋಚನೆಗಾಗಿ ಚಿಂತಿಸಿದ್ದಾರೆ. ಇವರೆಲ್ಲ ಇಷ್ಟಲಿಂಗಕ್ಕೆ ಶರಣಾದರೆ ಎಲ್ಲ ತೆರೆನಾದ ಮೂಢನಂಬಿಕೆಗಳಿಂದ ಮುಕ್ತರಾಗುವರು. ಇಷ್ಟಲಿಂಗವೆಂಬ ವೈಚಾರಿಕ ದೊಣ್ಣೆಯಿಂದ ನೂರಾರು ಮಡಕೆಗಳಂತಿರುವ ಕ್ಷುದ್ರದೇವತೆಗಳನ್ನು ನಾಶಗೊಳಿಸುವುದು ಕಷ್ಟಕರವಲ್ಲ ಎಂದು ಬಸವಣ್ಣನವರು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಇಷ್ಟಲಿಂಗದ ಪೂಜೆಗೆ ಖರ್ಚಿಲ್ಲ. ಅದಕ್ಕೆ ಹರಕೆ ಹೊರಬೇಕಿಲ್ಲ. ಅದು ಯಾರನ್ನೂ ಕಾಡುವುದಿಲ್ಲ. ಎಲ್ಲರಲ್ಲೂ ಆತ್ಮಶಕ್ತಿ ತುಂಬುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News