ಸ್ವಾತಂತ್ರ್ಯ ಹೋರಾಟಗಾರ ರಾಜ್ ಗುರು ಹೆಸರನ್ನು ಆರೆಸ್ಸೆಸ್ ಜೊತೆ ಥಳುಕು ಹಾಕಬೇಡಿ: ಕುಟುಂಬಸ್ಥರು

Update: 2018-04-03 13:22 GMT

ಮುಂಬೈ, ಎ.3: ಸ್ವಾತಂತ್ರ್ಯ ಹೋರಾಟಗಾರ ರಾಜ್ ಗುರು ಓರ್ವ ಆರೆಸ್ಸೆಸ್ ಸ್ವಯಂಸೇವಕರಾಗಿದ್ದರು ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ಕೃತಿಯೊಂದು ಹೇಳಿರುವುದು ಅವರ ಕುಟುಂಬ ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ರಾಜಗುರು ಅವರು ಆರೆಸ್ಸೆಸ್ ಜತೆ ನಂಟು ಹೊಂದಿದ್ದಾರೆನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಮಾಜಿ ಆರೆಸ್ಸೆಸ್ ಪ್ರಚಾರಕ ಹಾಗೂ ಪತ್ರಕರ್ತ ನರೇಂದರ್ ಸೆಹಗಲ್ ಅವರು ತಮ್ಮ ಕೃತಿಯಲ್ಲಿ ಭಗತ್ ಸಿಂಗ್ ಮತ್ತು ಸುಖ್ ದೇವ್ ಜತೆ 1931ರಲ್ಲಿ ಗಲ್ಲಿಗೇರಿಸಲ್ಪಟ್ಟ ರಾಜ್ ಗುರು ಸಂಘದ ಸ್ವಯಂಸೇವಕರಾಗಿದ್ದರು ಎಂದಿದ್ದರು.

"ಹಾಗೆನ್ನುವುದಕ್ಕೆ ಯಾವುದೇ ಆಧಾರವಿಲ್ಲ ಹಾಗೂ ನಮ್ಮ ತಾತ ಕೂಡ ಹಾಗೆಂದು ಹೇಳಿರಲಿಲ್ಲ" ಎಂದು ರಾಜ್ ಗುರು ಅವರ ಸೋದರನ ಮೊಮ್ಮಕ್ಕಳಾದ ಸತ್ಯಶೀಲ್ ಹಾಗೂ ಹರ್ಷವರ್ಧನ್ ರಾಜ್ ಗುರು ತಿಳಿಸಿದ್ದಾರೆ.  "ಆದರೆ ರಾಜ್ ಗುರು ಅವರು ನಾಗಪುರದಲ್ಲಿ ಸ್ವಲ್ಪ ಸಮಯ ತಂಗಲು ಸಂಘದ ಸ್ವಯಂಸೇವಕರೊಬ್ಬರು ಏರ್ಪಾಟುಗಳನ್ನು ಮಾಡಿದ್ದು ನಿಜ. ಆದರೆ  ಇಡೀ ದೇಶದ ಕ್ರಾಂತಿಕಾರಿಯಾಗಿದ್ದ ರಾಜ್ ಗುರು ಅವರ ಹೆಸರನ್ನು ಯಾವುದೇ ನಿರ್ದಿಷ್ಟ ಸಂಘಟನೆ ಜತೆ ಥಳಕು ಹಾಕುವ ಕೆಲಸ ಮಾಡಬಾರದು'' ಎಂದು ಅವರು ಮರಾಠಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ರಾಜ್ ಗುರು ಅವರ ನಾಗ್ಪುರ ಭೇಟಿಯ ಸಂದರ್ಭ ಅವರ ವಾಸಕ್ಕೆ ಆರೆಸ್ಸೆಸ್ ಸ್ಥಾಪಕ ಕೆ.ಬಿ.ಹೆಡ್ಗೆವಾರ್ ಅವರೇ ರಹಸ್ಯವಾಗಿ ಏರ್ಪಾಟು ಮಾಡಿರಬಹುದು ಎಂದು ಹಿರಿಯ ಆರೆಸ್ಸೆಸ್ ನಾಯಕ ಎಂ.ಜಿ. ವೈದ್ಯ ಹೇಳಿದ್ದಾರೆ. ರಾಜ್ ಗುರು ಅವರು ಆರೆಸ್ಸೆಸ್ಸಿನ ನಾಗ್ಪುರದ ಮೋಹಿತೆ ಬಾಘ್ ಶಾಖಾಗೆ ಭೇಟಿ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ  ವೈದ್ಯ ``ಅವರು ಬಂದಿರಬಹುದು'' ಎಂದಷ್ಟೇ ಹೇಳಿದರು. ರಾಜಗುರು ಬಗ್ಗೆ ಸಂಘದ ಸಭೆಗಳಲ್ಲಿ ಚರ್ಚೆ ನಡೆದಿತ್ತೇ ಎಂಬ ಪ್ರಶ್ನೆಗೆ "ಕನಿಷ್ಠ ಇದರ ಬಗ್ಗೆ ನಾನು ಕೇಳಿಲ್ಲ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News