ಪಾಕ್ ಪಡೆಗಳ ಗುಂಡಿನ ದಾಳಿ: ಐವರು ಯೋಧರಿಗೆ ಗಾಯ
ಶ್ರೀನಗರ, ಎ.3: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಸೇನಾಧಿಕಾರಿಯೂ ಸೇರಿದಂತೆ ಭಾರತದ ಐವರು ಯೋಧರು ಗಾಯಗೊಂಡಿದ್ದಾರೆ.
ಮಂಗಳವಾರ ಬೆಳಗ್ಗಿನ ಜಾವ ಕೃಷ್ಣ ಘಾಟಿ ಪ್ರದೇಶದಲ್ಲಿ ಪಾಕ್ ಸೇನೆ ಕದನವಿರಾಮ ಉಲ್ಲಂಘಿಸಿ, ಅಪ್ರಚೋದಿತವಾಗಿ ಲಘು ಸ್ವಯಂಚಾಲಿತ ಶಸ್ತ್ರ ಹಾಗೂ ಮೋರ್ಟರ್‌ಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ ಭಾರತದ ಸೇನಾಪಡೆಯ ಓರ್ವ ಅಧಿಕಾರಿ ಹಾಗೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಸೇನಾಪಡೆಯ ವಕ್ತಾರರು ತಿಳಿಸಿದ್ದಾರೆ. ಲೆಫ್ಟಿನೆಂಟ್ ಕೆ.ಭಾರ್ಗವ , ಯೋಧರಾದ ವಿಕಾಸ್ ಮೋತಿಲಾಲ್, ಸಮೀರ್ ಕಾಶಿನಾಥ್, ಸಂದೀಪ್ ಹಾಗೂ ಮಸ್ತ್‌ಪುರೆ ಸುಭಂ ಗಾಯಗೊಂಡಿದ್ದು ಅವರನ್ನು ಹೆಲಿಕಾಪ್ಟರ್ ಮೂಲಕ ಉಧಂಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮ್ಮುವಿನ ಗಡಿ ನಿಯಂತ್ರಣಾ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ವರ್ಷದ ಜನವರಿ 3ನೇ ವಾರದಿಂದ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ 12 ಭದ್ರತಾ ಸಿಬ್ಬಂದಿ ಹಾಗೂ 14 ನಾಗರಿಕರು ಮೃತಪಟ್ಟಿದ್ದಾರೆ. ಫೆಬ್ರವರಿಯಲ್ಲಿ ಪೂಂಛ್ ಹಾಗೂ ರಜೌರಿ ಕ್ಷೇತ್ರಗಳಲ್ಲಿ ಪಾಕ್ ಪಡೆಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದರು.
ಪಾಕ್ ಪಡೆಗಳೊಂದಿಗೆ ಸೇರಿಕೊಂಡಿರುವ ಭಯೋತ್ಪಾದಕರು ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. ಗಡಿಭಾಗದಿಂದ ಒಳನುಸುಳುವ ಭಯೋತ್ಪಾದಕರ ಸತತ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.