×
Ad

ರಾಜಸ್ಥಾನದ ಹಿಂಡೌನ್‌ನಲ್ಲಿ ಹಿಂಸೆ:ದಲಿತ ನಾಯಕರ ಮನೆಗಳಿಗೆ ಬೆಂಕಿ

Update: 2018-04-03 20:40 IST

ಜೈಪುರ,ಎ.3: ಎಸ್‌ಸಿ/ಎಸ್‌ಟಿ ಕಾಯ್ದೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್ ಸಂದರ್ಭದಲ್ಲಿ ಲೂಟಿ ಮತ್ತು ದಾಂಧಲೆ ಕೃತ್ಯಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ಕೈರಾಲಿ ಜಿಲ್ಲೆಯ ಹಿಂಡೌನ್‌ನಲ್ಲಿ ನಡೆದ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದು, ಘರ್ಷಣೆಗಳು ನಡೆದಿವೆ. ನಗರದಲ್ಲಿ ಕರ್ಫ್ಯೂ ಹೇರಲಾಗಿದ್ದು, 45 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಸೋಮವಾರದ ಹಿಂಸಾಚಾರಗಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಬೀದಿಗಿಳಿದ ಜನರು ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿತ್ತು. ಉದ್ರಿಕ್ತ ಗುಂಪು ಬಿಜೆಪಿ ಶಾಸಕಿ ರಾಜಕುಮಾರಿ ಜಾತವ್ ಮತ್ತು ಕಾಂಗ್ರೆಸ್‌ನ ಮಾಜಿ ಸಚಿವ ಭರೋಸಿಲಾಲ್ ಜಾತವ್ ಸೇರಿದಂತೆ ದಲಿತ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿತು.

ಬೆಳಿಗ್ಗೆ ಪೊಲೀಸರು ಪಥ ಸಂಚಲನ ನಡೆಸಿದಾಗ ಹಿಂಸಾಚಾರ ದಲ್ಲಿ ತೊಡಗಿದ್ದ ಕೆಲವು ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿಗಳೊಂದಿಗೆ ಘರ್ಷಣೆಗಿಳಿದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದವು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದ್ದು, ಈ ವೇಳೆ ಕೆಲವು ಶೆಲ್‌ಗಳು ಸರಕಾರಿ ಶಾಲೆಯಲ್ಲಿ ಬಿದ್ದು ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಹಿಂಡೌನ್ ಹೊರತುಪಡಿಸಿ ರಾಜ್ಯದ ಇತರ ಭಾಗಗಳು ಸಹಜ ಸ್ಥಿತಿಗೆ ಮರಳಿವೆ ಎಂದು ರಾಜ್ಯ ಪೊಲೀಸ್ ವರಿಷ್ಠ ಒ.ಒ.ಗಲ್ಹೋತ್ರಾ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News