ಸಮ್ಮತಿಯಿಲ್ಲದೆ ಪತ್ನಿ ಜೊತೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಗುಜರಾತ್ ಹೈಕೋರ್ಟ್

Update: 2018-04-03 15:40 GMT

ಅಹ್ಮದಾಬಾದ್, ಎ.3: ಪತ್ನಿ ಜೊತೆ ಸಮ್ಮತಿಯಿಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಾಗುವುದಿಲ್ಲ ಎಂದು ಗುಜರಾತ್ ಉಚ್ಚ ನ್ಯಾಯಾಲಯ ಸೋಮವಾರ ತಿಳಿಸಿದೆ.

ತನ್ನ ಪತ್ನಿ ತನ್ನ ವಿರುದ್ಧ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕೆಂದು ಕೋರಿ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವೇಳೆ ನ್ಯಾಯಾಧೀಶ ಜೆ.ಬಿ ಪರ್ದಿವಾಲಾ ಅವರು ಈ ಆದೇಶವನ್ನು ನೀಡಿದ್ದಾರೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 375ರ ವಿನಾಯಿತಿ ಪ್ರಕಾರ, ಪತ್ನಿಯ ದೂರಿನ ಆಧಾರದಲ್ಲಿ ಪತಿಯ ಮೇಲೆ ಅತ್ಯಾಚಾರ ಪ್ರಕರಣದಡಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಈ ವಿನಾಯಿತಿಯ ಪ್ರಕಾರ ತನ್ನ ಪತ್ನಿ ಜೊತೆ ವ್ಯಕ್ತಿಯೊಬ್ಬ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವಾಗುವುದಿಲ್ಲ. ಆದರೆ ಪತ್ನಿಯು ಸೆಕ್ಷನ್ 377ರ ಅಡಿಯಲ್ಲಿ ಪತಿಯ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ದೂರು ದಾಖಲಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಸಂತ್ರಸ್ತೆ, ತನ್ನ ಪತಿಯ ವಿರುದ್ಧ ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ವರದಕ್ಷಿಣೆ ಕಿರುಕುಳ ಆರೋಪದಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ರದ್ದುಪಡಿಸಬೇಕೆಂದು ಆರೋಪಿ ವೈದ್ಯ ಪತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ದೂರಿನಲ್ಲಿ ನ್ಯಾಯಾಲಯವು ಅತ್ಯಾಚಾರ ಆರೋಪವನ್ನು ತೆಗೆದು ಹಾಕಿದ್ದರೂ ವರದಕ್ಷಿಣೆ ಕಿರುಕುಳ ಆರೋಪದ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ. ಜೊತೆಗೆ ಆರೋಪಿಯ ಹೆತ್ತವರ ಮೇಲೆ ಹೊರಿಸಲಾದ ಆರೋಪವನ್ನೂ ನ್ಯಾಯಾಲಯ ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News