40 ಕೋಟಿ ರೂ. ಬಿಡುಗಡೆಯಾಗಿದ್ದರೂ ನಿರ್ಮಾಣವಾಗಿಲ್ಲ ಒಂದು ಶೌಚಾಲಯ!

Update: 2018-04-03 16:23 GMT

ಹೊಸದಿಲ್ಲಿ, ಎ.3: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಯೋಜನೆಯಡಿ ಕಳೆದ ಎರಡೂವರೆ ವರ್ಷಗಳಲ್ಲಿ ದಿಲ್ಲಿಗೆ 40 ಕೋಟಿ ರೂಪಾಯಿ ಹಂಚಿಕೆಯಾಗಿದ್ದರೂ, ಒಂದು ಶೌಚಾಲಯ ಕೂಡಾ ನಿರ್ಮಾಣವಾಗಿಲ್ಲ. ಇದಕ್ಕಾಗಿ ಬಿಡುಗಡೆಯಾದ ಹಣ ಕೊಳೆಯುತ್ತಾ ಬಿದ್ದಿದೆ ಎಂದು ಸಿಎಜಿ ವರದಿ ಹೇಳಿದೆ.

ದಿಲ್ಲಿ ವಿಧಾನಸಭೆಯಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯನ್ನು ಮಂಡಿಸಲಾಗಿದ್ದು, ಆಪ್ ಸರಕಾರ ಅಗತ್ಯಕ್ಕೆ ಅನುಗುಣವಾಗಿ ಅನುಷ್ಠಾನ ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ದಿಲ್ಲಿಯ ಎಲ್ಲ ಮೂರು ಮಹಾನಗರ ಪಾಲಿಕೆಗಳು ಮತ್ತು ದೆಹಲಿ ನಗರ ವಸತಿ ಸುಧಾರಣಾ ಮಂಡಳಿಗೆ 40.31 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇದರಲ್ಲಿ ರಾಜ್ಯದ 10.08 ಕೋಟಿ ಕೂಡಾ ಸೇರಿದೆ. ಆದರೆ 2017ರ ಮಾರ್ಚ್‍ವರೆಗೆ ಯಾವುದೇ ಮೊತ್ತ ಬಳಕೆಯಾಗಿಲ್ಲ.

"ಎನ್‍ಡಿಎಂಸಿ, ಎಸ್‍ಡಿಎಂಸಿ ಮತ್ತು ಡಿಸಿಬಿ ಯಾವುದೇ ಕುಟುಂಬ ಶೌಚಾಲಯಗಳ ಅಗತ್ಯತೆಯನ್ನು ಮೌಲ್ಯಮಾಪನ ಮಾಡಿಲ್ಲ. ಆದರೆ ಸ್ವಚ್ಛಭಾರತ ಮಿಷನ್ ಅನುದಾನವಾಗಿ 16.92 ಕೋಟಿ ರೂಪಾಯಿ ಬಿಡುಗಡೆಎ ಮಾಡಲಾಗಿದೆ" ಎಂದು ಸಿಎಜಿ ವರದಿ ಹೇಳಿದೆ.

ನಗರವನ್ನು ಬಯಲುಶೌಚ ಮುಕ್ತಗೊಳಿಸುವ ಹೊಣೆ ಡಿಯುಎಸ್‍ಐಬಿ ಮೇಲಿದ್ದು, ಕೊಳಗೇರಿ ಹಾಗೂ ಜೆಜೆ ಕ್ಲಸ್ಟರ್‍ಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಆದರೆ ದಿಲ್ಲಿ ಸರ್ಕಾರದಿಂದ ಈ ಸಂಸ್ಥೆಗೆ ಹಣ ಬಿಡುಗಡೆಯಾಗಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News