×
Ad

ವಿಮಾನದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಾಟ ಮಾಡಿದ ಭೂಪ !

Update: 2018-04-03 22:19 IST

ಕೊಚ್ಚಿ, ಎ. 3: ವಿದೇಶಗಳಿಂದ ಅಕ್ರಮವಾಗಿ ಭಾರತಕ್ಕೆ ಚಿನ್ನ ಸಾಗಾಟ ಮಾಡಲು ಪ್ರಯಾಣಿಕರು ಹಲವು ತಂತ್ರಗಳನ್ನು ಬಳಸಿದ್ದಾರೆ ಹಾಗೂ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದಕ್ಕಾಗಿ ಪ್ರಯಾಣಿಕರು ಹೊಸ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಕಳೆದ ವಾರ ನೆಡುಂಬಾಶ್ಶೇರಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡು ನಿವಾಸಿಯೋರ್ವ ಚಿನ್ನವನ್ನು ಪೇಸ್ಟ್ ಆಗಿ ಪರಿವರ್ತಿಸಿ ತಂದಿದ್ದಾನೆ. ಆದರೂ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತ ತಂದ ಚಿನ್ನದ ಪೇಸ್ಟ್ 851 ಗ್ರಾಂ. ತೂಕ ಹಾಗೂ 26.3 ಲಕ್ಷ ರೂ. ಮೌಲ್ಯ ಹೊಂದಿತ್ತು. ಚಿನ್ನಕ್ಕೆ ಸಂಕೀರ್ಣ ರಾಸಾಯನಿಕಗಳನ್ನು ಬೆರೆಸಿ ಪೇಸ್ಟ್ ರೂಪಕ್ಕೆ ಪರಿವರ್ತಿಸಲಾಗಿತ್ತು. ಈ ಬೆಲ್ಟ್ ಮಾದರಿಯ ಪೊಟ್ಟಣದಲ್ಲಿ ಇದನ್ನು ತುಂಬಿಸಿ ಸೊಂಟದ ಸುತ್ತ ಕಟ್ಟಲಾಗಿತ್ತು.

 ‘‘ನಾವು ಇಂತಹ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದೇವೆ. ಲೋಹ ಶೋಧಕದಲ್ಲಿ ಚಿನ್ನವನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಇಂತಹ ಪ್ರಕರಣಗಳು ನೆಡುಂಬಾಶ್ಶೇರಿ, ಕೋಝಿಕೋಡ್ ಹಾಗೂ ತಿರುವನಂತಪುರ ವಿಮಾನ ನಿಲ್ದಾಣಗಳಲ್ಲಿ ಬೆಳಕಿಗೆ ಬಂದಿವೆ. ಬೇಹುಗಾರಿಕೆ ಸಂಸ್ಥೆಯ ಮಾಹಿತಿ ಹಿನ್ನೆಲೆಯಲ್ಲಿ ನಾವು ಈ ರೀತಿ ಚಿನ್ನ ಸಾಗಾಟ ಮಾಡುತ್ತಿದ್ದ ಪ್ರಯಾಣಿಕರನ್ನು ಬಂಧಿಸಿದ್ದೇವೆ’’ ಎಂದು ಕಸ್ಟಮ್ಸ್ ಆಯುಕ್ತ ಸುಮಿತ್ ಕುಮಾರ್ ಹೇಳಿದ್ದಾರೆ.

ರಾಸಾಯನಿಕ ತಜ್ಞರ ಮೂಲಕ ಚಿನ್ನವನ್ನು ಪೇಸ್ಟ್ ಮಾಡಲಾಗುತ್ತದೆ. ಲೋಹ ಶೋಧಕದಲ್ಲಿ ಪತ್ತೆಯಾಗದೇ ಇರುವುದರಿಂದ ಈ ರೀತಿಯ ಸಾಗಾಟ ತೀವ್ರ ಕಳವಳ ಉಂಟು ಮಾಡಿದೆ ಎಂದು ಇನ್ನೋರ್ವ ಕಸ್ಟಮ್ಸ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News