ಮತದಾರರನ್ನು ಮತದಾನಕ್ಕೆ ಆಹ್ವಾನಿಸಲು ಆಮಂತ್ರಣ ಪತ್ರಿಕೆ!

Update: 2018-04-04 05:23 GMT

ಉಡುಪಿ, ಎ.3: ಮನೆಮಂದಿಗೆ ಆಮಂತ್ರಣ ಪತ್ರಿಕೆಗಳನ್ನು ನೀಡಿ ಮದುವೆ, ಗೃಹಪ್ರವೇಶ ಗಳಂತಹ ಶುಭ ಸಮಾರಂಭಗಳಿಗೆ ಆಹ್ವಾನಿ ಸುವ ರೀತಿಯಲ್ಲಿ ಉಡುಪಿ ಜಿಲ್ಲಾಡಳಿತವು ಮತದಾರರನ್ನು ಮತದಾನ ಮಾಡಲು ಆಹ್ವಾನಿ ಸುವುದಕ್ಕಾಗಿ ಮನೆಮನೆಗಳಿಗೆ ಆಮಂತ್ರಣ ಪತ್ರಿಕೆ ಹಂಚುವ ವಿಶೇಷ ಪ್ರಯೋಗವನ್ನು ಕೈಗೆತ್ತಿಕೊಂಡಿದೆ.

ಉಡುಪಿ ಜಿಲ್ಲಾಡಳಿತದ ಸ್ವೀಪ್ ಸಮಿತಿಯು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತ ದಾನ ನಡೆದಿರುವ ಮತಗಟ್ಟೆಗಳ ವ್ಯಾಪ್ತಿಯ ಮತದಾರರನ್ನು ಮತದಾನ ಮಾಡಲು ಬರುವಂತೆ ಆಹ್ವಾನಿಸುವ ಪೋಸ್ಟ್ ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆಗಳನ್ನು ಮನೆ ಮನೆಗಳಿಗೆ ತಲುಪಿಸಲು ಸಿದ್ಧಪಡಿಸಿದೆ.

ಕಡಿಮೆ ಮತದಾನದ ಮತಗಟ್ಟೆ: ಉಡುಪಿ ಜಿಲ್ಲೆಯಲ್ಲಿ ಒಟ್ಟು 1,078 ಮತಗಟ್ಟೆಗಳಿದ್ದು, ಬೈಂದೂರು ಕ್ಷೇತ್ರದಲ್ಲಿ 243, ಕುಂದಾಪುರ 215, ಉಡುಪಿ 213, ಕಾಪು 203 ಹಾಗೂ ಕಾರ್ಕಳ ಕ್ಷೇತ್ರದಲ್ಲಿ 204 ಮತಗಟ್ಟೆಗಳಿವೆ. ಇದರಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ.60ಕ್ಕಿಂತ ಕಡಿಮೆ ಮತದಾನ ಆಗಿರುವ ಒಟ್ಟು 7 ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಮೂರು ಹಂತದಲ್ಲಿ ಜಾಗೃತಿ: ಅತ್ಯಂತ ಕಡಿಮೆ ಮತದಾನ ಆಗಿರುವ ಈ ಏಳು ಮತ ಗಟ್ಟೆ ವ್ಯಾಪ್ತಿಯ ಮತದಾರರಲ್ಲಿ ಮತದಾನದ ಜಾಗೃತಿ ಮತ್ತು ಭಾಗವಹಿಸುವಿಕೆಗಾಗಿ ಮೂರು ಹಂತದಲ್ಲಿ ಕರಪತ್ರ ಹಂಚುವ ಕಾರ್ಯಕ್ರಮ ವನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ.

ಇದಕ್ಕಾಗಿ ಸ್ವೀಪ್ ಸಮಿತಿಯು ವಿಶಿಷ್ಟ ಕರ ಪತ್ರವನ್ನು ಸಿದ್ಧಪಡಿಸಿದೆ. ಅದರಲ್ಲಿ ಮತದಾರರ ಪ್ರತಿಜ್ಞಾ ವಿಧಿ, ಸಹಾಯವಾಣಿಯ ದೂರವಾಣಿ ಸಂಖ್ಯೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಹಿತಿ, ಮತದಾನ ಮಾಡುವ ರೀತಿಯ ಕುರಿತ ವಿವರಗಳನ್ನು ಪ್ರಕಟಿಸಲಾಗಿದೆ. ಕರಪತ್ರದ ಇನ್ನೊಂದು ಪುಟಯಲ್ಲಿ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಕೇತ್ ಮತದಾನ ಜಾಗೃತಿ ಕುರಿತು ರಚಿಸಿದ ಚಿತ್ರವನ್ನು ಮುದ್ರಿಸಲಾಗಿದೆ.

ಮೊದಲನೆ ಹಂತದಲ್ಲಿ ಮನೆಮನೆಗೆ ಹೋಗುವ ದಿನ ಪತ್ರಿಕೆಯ ಮೂಲಕ ಈ ಕರಪತ್ರಗಳನ್ನು ವಿತರಿಸಲಾಗುತ್ತದೆ. ಎರಡನೆ ಹಂತದಲ್ಲಿ ಕಡಿಮೆ ಮತದಾನ ನಡೆದಿರುವ ಮತಗಟ್ಟೆ ವ್ಯಾಪ್ತಿಯ ಗ್ರಾಪಂಗಳ ಪಿಡಿಓಗಳಿಗೆ ಈ ಕರಪತ್ರವನ್ನು ಕಳುಹಿಸಿ ಅಲ್ಲಿಂದ ಸ್ಥಳೀಯ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರ ಮೂಲಕ ಕರಪತ್ರಗಳನ್ನು ಮನೆ ಮನೆಗಳಿಗೆ ವಿತರಿಸಲಾಗುತ್ತದೆ. ಈಗಾಗಲೇ ಶೀರೂರು ಮತ್ತು ಬೈಂದೂರು ಮತಗಟ್ಟೆಗಳಿಗೆ ಬೇಕಾದ ಸುಮಾರು 2,000 ಕರಪತ್ರಗಳನ್ನು ಕಳುಹಿಸಿಕೊಡಲಾಗಿದೆ.

ಮನೆಮನೆಗೆ ಆಮಂತ್ರಣ: ‘ಮೇ12ರಂದು ಮತದಾನ ಮಾಡಲು ಬನ್ನಿ’ ಎಂಬ ಬರಹ ಹಾಗೂ ವಿದ್ಯಾರ್ಥಿ ರಚಿಸಿದ ಮತದಾನ ಜಾಗೃ ತಿಯ ಚಿತ್ರ ಇರುವ ಫೋಸ್ಟ್‌ಕಾರ್ಡ್‌ಗಳನ್ನು ಮನೆಮನೆಗಳಿಗೆ ತಲುಪಿಸಿ ಮತದಾರರನ್ನು ಮತದಾನಕ್ಕೆ ಆಹ್ವಾನಿಸುವ ಕಾರ್ಯಕ್ರಮವನ್ನು ಮೂರನೆ ಹಂತದಲ್ಲಿ ಹಮ್ಮಿ ಕೊಳ್ಳಲಾಗಿದೆ.

ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಮತಗಟ್ಟೆ ವ್ಯಾಪ್ತಿಯ ಮನೆಗಳಿಗೆ ಮತದಾನ ಜಾಗೃತಿಯ ಈ ಫೋಸ್ಟ್ ಕಾರ್ಡ್ ಆಮಂತ್ರಣ ಪತ್ರಿಕೆಗಳನ್ನು ಅಂಚೆ ಇಲಾಖೆಯ ಮೂಲಕ ಮನೆಮನೆಗಳಿಗೆ ತಲುಪಿಸಲು ಜಿಲ್ಲಾಡಳಿತವು ಈ ಮೊದಲು ಯೋಜನೆ ಹಾಕಿಕೊಂಡಿತ್ತು. ಆದರೆ ಫೋಸ್ಟ್‌ಮ್ಯಾನ್‌ಗಳು ಪತ್ರಗಳಿರುವ ಮನೆಗಳಿಗೆ ಮಾತ್ರ ತೆರಳುವುದರಿಂದ ಈ ಆಮಂತ್ರಣ ಪತ್ರಿಕೆ ಎಲ್ಲ ಮನೆಗಳಿಗೂ ತಲು ಪಲು ಸಾಧ್ಯ ವಿರುವುದಿಲ್ಲ. ಅಲ್ಲದೆ ಜಿಲ್ಲಾಡಳಿತ ನಿಗದಿಪಡಿಸಿದ ಸಮಯ ದೊಳಗೆ ಈ ಕಾರ್ಡ್ ತಲುಪುವ ಸಾಧ್ಯತೆ ಕೂಡ ಕಡಿಮೆ. ಇದನ್ನು ಅರಿತ ಜಿಲ್ಲಾಡಳಿತ ಆಯಾ ಮತ ಗಟ್ಟೆ ವ್ಯಾಪ್ತಿಯ ಸರಕಾರಿ ಸಿಬ್ಬಂದಿಯ ಮೂಲಕ ಮನೆಮನೆಗಳಿಗೆ ಫೋಸ್ಟ್ ಕಾರ್ಡ್‌ಗಳನ್ನು ಮುಟ್ಟಿಸಿ ಮತದಾನ ಮಾಡಲು ಮತಗಟ್ಟೆಗೆ ಆಹ್ವಾನಿಸುವ ಯೋಜನೆ ಹಾಕಿಕೊಂಡಿದೆ.ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಇದೀಗ ನಡೆಯುತ್ತಿವೆ.

ಕಡಿಮೆ ಮತದಾನವಾದ ಮತಗಟ್ಟೆಗಳು

► ಬೈಂದೂರು ವಿಧಾನಸಭಾ ಕ್ಷೇತ್ರದ ಶೀರೂರು ಸರಕಾರಿ ಮಾದರಿ ಹಿ.ಪ್ರಾ. ಶಾಲೆ- ಶೇ.55.10

► ಶೀರೂರು ಮೇಲ್ಪಂಕ್ತಿ ಹಿ.ಪ್ರಾ. ಶಾಲೆ- ಶೇ.60

► ಶೀರೂರು ಹಿಂದೂಸ್ತಾನಿ ಹಿ.ಪ್ರಾ. ಶಾಲೆ- ಶೇ.57.69

► ಬೈಂದೂರು ಹಿಂದೂಸ್ತಾನಿ ಹಿ.ಪ್ರಾ.ಶಾಲೆ- 54.28

► ಉಡುಪಿ ವಿಧಾನಸಭಾ ಕ್ಷೇತ್ರದ ಮಣಿಪಾಲ ಜೂನಿಯರ್ ಕಾಲೇಜು- ಶೇ.54.16

► ಕಾಪು ವಿಧಾನಸಭಾ ಕ್ಷೇತ್ರದ ಏಣಗುಡ್ಡೆ ಅಗ್ರಹಾರ ಶ್ರೀದುರ್ಗಾ ಪರಮೇಶ್ವರಿ ಹಿ.ಪ್ರಾ. ಶಾಲೆ- ಶೇ.41.84

► ಕಾಪು ಸರಕಾರಿ ಮಾದರಿ ಹಿ.ಪ್ರಾ.ಶಾಲೆ- ಶೇ.42.99

ಕಳೆದ ಬಾರಿ ಕಡಿಮೆ ಮತದಾನ ನಡೆದ ಮತ ಗಟ್ಟೆ ವ್ಯಾಪ್ತಿಯಲ್ಲಿ ಮತ ದಾನದ ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ಅಂಚೆ ಕಾರ್ಡ್‌ನಲ್ಲಿ ವಿಶೇಷ ಆಮಂತ್ರಣವನ್ನು ಸಿದ್ಧಪಡಿ ಸಲಾಗಿದೆ. ಇದನ್ನು ಆ ಮತಗಟ್ಟೆ ವ್ಯಾಪ್ತಿಯ ಎಲ್ಲಾ ಕುಟುಂಬಗಳಿಗೆ ಸಂಬಂಧ ಪಟ್ಟ ಪಂಚಾಯತ್‌ಗಳ ಮೂಲಕ ತಲುಪಿಸಿ ಮತದಾನ ಮಾಡುವಂತೆ ಆಮಂತ್ರಣ ನೀಡಲಾ ಗುವುದು. ಇದರೊಂದಿಗೆ ಮತದಾ ನದ ಪ್ರಮಾಣವನ್ನು ಹೆಚ್ಚಿಸಲು ಪ್ರಯ ತ್ನಿಸಲಾಗುವುದು.

ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಉಡುಪಿ

83 ಮತಗಟ್ಟೆಗಳಲ್ಲಿ ಅಧ್ಯಯನ

ಉಡುಪಿ ಜಿಲ್ಲೆಯಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನ ನಡೆದಿರುವ ಸುಮಾರು 83 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಕಡಿಮೆ ಮತದಾನಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಈಗಾಗಲೇ ನೋಡೆಲ್ ಅಧಿಕಾರಿಗಳು ಅಧ್ಯಯನ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶೇ.70ಕ್ಕಿಂತ ಕಡಿಮೆ ಮತದಾನ ಆಗಿರುವ ಕಾಪು ಕ್ಷೇತ್ರದ 17 ಮತ್ತು ಬೈಂದೂರು ಕ್ಷೇತ್ರದ 22, ಶಿಶು ಕಲ್ಯಾಣಾಧಿಕಾರಿಗಳು ಕುಂದಾಪುರ ಕ್ಷೇತ್ರದ 19 ಮತ್ತು ಉಡುಪಿ ಕ್ಷೇತ್ರದ 20 ಹಾಗೂ ಐಟಿಡಿಪಿಯ ಯೋಜನಾಧಿಕಾರಿಗಳು ಕಾರ್ಕಳ ಕ್ಷೇತ್ರದ 5 ಮತಗಟ್ಟೆಯಲ್ಲಿ ಈ ಅಧ್ಯಯನವನ್ನು ನಡೆಸಿದ್ದಾರೆ

Writer - ವರದಿ: ನಝೀರ್ ಪೊಲ್ಯ

contributor

Editor - ವರದಿ: ನಝೀರ್ ಪೊಲ್ಯ

contributor

Similar News