ಕೇಜ್ರಿವಾಲ್‌ರನ್ನು ಭೇಟಿಯಾದ ಚಂದ್ರಬಾಬು ನಾಯ್ಡು

Update: 2018-04-04 06:18 GMT

ಹೊಸದಿಲ್ಲಿ, ಎ.4:ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ಬಳಿಕ ಮೊದಲ ಬಾರಿ ದಿಲ್ಲಿಗೆ ಭೇಟಿ ನೀಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

 ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ಮೇಲೆ ಒತ್ತಡ ಹೇರಲು ತನಗೆ ಬೆಂಬಲ ನೀಡಬೇಕೆಂದು ಕೇಜ್ರಿವಾಲ್ ಸಹಿತ ಇತರ ವಿಪಕ್ಷ ನಾಯಕರನ್ನು ನಾಯ್ಡು ಭೇಟಿಯಾಗಿದ್ದಾರೆ.

ಆಂಧ್ರಪ್ರದೇಶ ಮರು ಸಂಘಟನೆ ಕಾಯ್ದೆ ಪ್ರಕಾರ ವಿಶೇಷ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ ಹೊರತಾಗಿಯೂ ಆಂಧ್ರಕ್ಕೆ ಅನ್ಯಾಯವಾಗಿದೆ ಎಂದು ಕೇಜ್ರಿವಾಲ್ ಬಳಿ ನಾಯ್ಡು ವಿವರಿಸಿದ್ದಾರೆ.

ಎರಡು ದಿನಗಳ ದಿಲ್ಲಿ ಭೇಟಿಯಲ್ಲಿರುವ ನಾಯ್ಡು, ಲೋಕಸಭೆಯಲ್ಲಿ ಬಾಕಿ ಇರುವ ಅವಿಶ್ವಾಸ ಗೊತ್ತುವಳಿ ಮಂಡನೆಗೆ ವಿಪಕ್ಷಗಳಿಂದ ಸಾಧ್ಯವಾದಷ್ಟು ಬೆಂಬಲ ಪಡೆಯಲು ಯತ್ನಿಸಲಿದ್ದಾರೆ.

ಕೇಜ್ರಿವಾಲ್ ಭೇಟಿ ಕೇವಲ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದ್ದು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ನಾಯ್ಡು ಸ್ಪಷ್ಟಪಡಿಸಿದ್ದಾರೆ.

 ಕಳೆದ ವಾರ ದಿಲ್ಲಿಗೆ ಭೇಟಿ ನೀಡಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸುವ ಬಗ್ಗೆ ವಿಪಕ್ಷ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News