ವಿವಾದಗಳ ನಡುವೆಯೇ ಪರಮಾಣು ರಿಲೀಸ್‌ಗೆ ರೆಡಿ

Update: 2018-04-06 13:15 GMT

ಪೋಖ್ರಾನ್‌ನಲ್ಲಿ ಭಾರತ ನಡೆಸಿದ ಮೊತ್ತಮೊದಲ ಪರಮಾಣು ಪರೀಕ್ಷೆಯ ಕತೆಯನ್ನೊಳಗೊಂಡ ಪರಮಾಣು- ‘ದ ಸ್ಟೋರಿ ಆಫ್ ಪೋಖ್ರಾನ್’ ಸಿನೆಮಾದ ಸುತ್ತ ಆವರಿಸಿಕೊಂಡಿರುವ ಎಲ್ಲ ವಿವಾದಗಳನ್ನು ಮೆಟ್ಟಿನಿಲ್ಲಲು ನಿರ್ಧರಿಸಿರುವ ನಟ ಜಾನ್ ಅಬ್ರಹಾಂ ತಮ್ಮ ಚಿತ್ರ ನಿರ್ಮಾಣ ಸಂಸ್ಥೆ ಎಜೆ ಎಂಟರ್‌ಟೈನ್ಮೆಂಟ್ ಮೂಲಕ ಈ ಸಿನೆಮಾವನ್ನು ಏಕಾಂಗಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಸದ್ಯ ಪರಮಾಣು ಸಿನೆಮಾವನ್ನು ಮೇ 4ಕ್ಕೆ ಬಿಡುಗಡೆ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಅಭಿಷೇಕ್ ಶರ್ಮಾ ನಿರ್ದೇಶನ ಮಾಡಿರುವ ಪರಮಾಣು ಸಿನೆಮಾದ ಮುಖ್ಯ ಪಾತ್ರಗಳಲ್ಲಿ ಜಾನ್ ಅಬ್ರಹಾಂ, ಡಯಾನಾ ಪೆಂಟಿ, ಬೊಮನ್ ಇರಾನಿ ಮುಂತಾದವರು ನಟಿಸಿದ್ದಾರೆ. ಈ ಸಿನೆಮಾವು ಸತ್ಯ ಕತೆಯನ್ನು ಆಧರಿಸಿದ್ದು ವೈರುಧ್ಯಗಳ ನಡುವೆಯೂ ಅಭೂತಪೂರ್ವವಾದುದನ್ನು ಸಾಧಿಸಿದ ಭಾರತೀಯ ಸೇನೆ ಮತ್ತು ವಿಜ್ಞಾನಿಗಳಿಗೆ ನೀಡಿರುವ ಗೌರವವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವು ಜೈ ಜವಾನ್, ಜೈ ವಿಜ್ಞಾನ್ ಎಂಬ ಘೋಷವಾಕ್ಯವನ್ನು ಎತ್ತಿಹಿಡಿಯಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಪರಮಾಣು ಶಕ್ತಿಯಾಗುವತ್ತ ಸಾಗಿದ ಭಾರತದ ಪ್ರಯಾಣದಂತೆ ನಮ್ಮ ಸಿನೆಮಾವು ಬಿಡುಗಡೆಯತ್ತ ಸಾಗಿದ ಪಯಣವೂ ಏಳುಬೀಳುಗಳಿಂದ ಕೂಡಿತ್ತು. ಆದರೆ ಭಾರತವು ಪ್ರಥಮ ಪರಮಾಣು ಪರೀಕ್ಷೆ ಅಪರೇಶನ್ ಶಕ್ತಿಯನ್ನು ನಡೆಸಿದ 20ನೇ ವರ್ಷದಲ್ಲೇ ಈ ಸಿನೆಮಾವನ್ನು ಬಿಡುಗಡೆ ಮಾಡುತ್ತಿರುವುದು ಖುಷಿ ನೀಡಿದೆ ಎಂದು ಎಂಟರ್‌ಟೈನ್ಮೆಂಟ್‌ನ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News