ವಿವಾದಕ್ಕೆ ಕಾರಣವಾದ ಮಾಧ್ಯಮ ಕಣ್ಗಾವಲು ಸಮಿತಿ ಸದಸ್ಯರ ಹೆಸರುಗಳು !

Update: 2018-04-06 15:11 GMT

ಹೊಸದಿಲ್ಲಿ, ಎ.6: ಸುಳ್ಳು ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳ ಅಥವಾ ಪತ್ರಕರ್ತರ ಮಾನ್ಯತೆಯನ್ನು ರದ್ದು ಮಾಡುವ ತನ್ನ ಆದೇಶಕ್ಕೆ ಮಾಧ್ಯಮ ಸಮುದಾಯದಿಂದ ತೀವ್ರ ಟೀಕೆಗಳು ಎದುರಾದ ಕಾರಣ ಆದೇಶವನ್ನು ಸರಕಾರ ವಾಪಸ್ ಪಡೆದಿದೆ. ಆದರೆ ಇದೀಗ ಮಾಧ್ಯಮಗಳ ಮೇಲೆ ನಿಗಾಯಿಡಲು ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಸಮಿತಿಗೆ ಆಯ್ಕೆ ಮಾಡಲಾದ ಸದಸ್ಯರ ಬಗ್ಗೆಯೂ ಅಸಮಾಧಾನದ ಮಾತುಗಳು ಕೇಳಿಬಂದಿದೆ.

ಸರಕಾರವು ಭಾರತೀಯ ಮಾಧ್ಯಮ ಮಂಡಳಿ (ಪಿಸಿಐ) ಮತ್ತು ಕೇಂದ್ರ ಮಾಧ್ಯಮ ಮಾನ್ಯತಾ ಸಮಿತಿ (ಸಿಪಿಎಸಿ) ಯನ್ನು ಪುನರ್‌ಸ್ಥಾಪಿಸಲು ನಿರ್ಧರಿಸಿದೆ. 28 ಸದಸ್ಯರನ್ನೊಳಗೊಂಡ ಸಮಿತಿಯಾಗಿರುವ ಪಿಸಿಐಯ ನೇತೃತ್ವವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ವಹಿಸಿರುತ್ತಾರೆ. ಈ ಸಮಿತಿಗೆ ಸರಕಾರ ನಿಯೋಜಿಸುವ ಎಂಟು ಸದಸ್ಯರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಇವರ ಪೈಕಿ ಐದು ಮಂದಿ ಸಂಸದರಾಗಿದ್ದು ನಾಲ್ವರು ಬಿಜೆಪಿ ಸಂಸದರಾಗಿದ್ದರೆ ಒಬ್ಬರು ಎಐಎಡಿಎಂಕೆಯ ಸಂಸದರಾಗಿದ್ದಾರೆ.

ಈ ಪಟ್ಟಿಯಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿರುವುದು ಈಗಾಗಲೇ ವಿವಾದಕ್ಕೆ ಕಾರಣವಾಗಿದೆ. ಪ್ರತಾಪ್ ಸಿಂಹ ಈ ಹಿಂದೆ ಸುಳ್ಳು ಸುದ್ದಿ ಹರಡಿದ ಕಾರಣಕ್ಕೆ ಬಂಧನಕ್ಕೊಳಗಾದ ಜಾಲತಾಣದ ಸ್ಥಾಪಕನ ಪರವಾಗಿ ಹೇಳಿಕೆ ನೀಡಿದ್ದರು. ಇನ್ನು, ಏಳು ಸಕ್ರಿಯ ಪತ್ರಕರ್ತರು, ಆರು ಸಂಪಾದಕರು, ಆರು ಮಾಧ್ಯಮ ಮಾಲಕರು ಅಥವಾ ವ್ಯವಸ್ಥಾಪಕರು ಮತ್ತು ಒಬ್ಬರು ಸುದ್ದಿ ಸಂಸ್ಥೆಯ ವ್ಯವಸ್ಥಾಪಕರನ್ನೊಳಗೊಂಡ ಇಪ್ಪತ್ತು ಹೆಸರುಗಳನ್ನು ಪಿಸಿಐಗೆ ಸೂಚಿಸಲಾಗಿದೆ. ಆದರೆ ಈಗ ಈ ಆಯ್ಕೆಯ ವಿರುದ್ಧವೂ ಮೇಲ್ಮನವಿ ಸಲ್ಲಿಸಲಾಗಿದೆ. ತಾನು ಆಯ್ಕೆ ಮಾಡಿದ ಸದಸ್ಯರನ್ನು ಅನರ್ಹಗೊಳಿಸಿರುವುದರಿಂದ ತೀವ್ರ ಅಸಮಾಧಾನವಾಗಿದೆ ಎಂದು ಎಡಿಟರ್ಸ್ ಗಿಲ್ಡ್ ತಿಳಿಸಿದೆ. ತಾನು ಆಯ್ಕೆ ಮಾಡಿರುವ ಸದಸ್ಯರ ಪೈಕಿ ಒಬ್ಬರನ್ನು ತಿರಸ್ಕರಿಸಿರುವ ನಿರ್ಧಾರದ ವಿರುದ್ಧ ಇಂಡಿಯನ್ ನ್ಯೂಸ್‌ಪೇಪರ್ಸ್ ಸೊಸೈಟಿ (ಐಎನ್‌ಎಸ್) ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ನ್ಯಾಯಾಲಯವು ಪಿಸಿಐ ನಿರ್ಧಾರಕ್ಕೆ ಜುಲೈವರೆಗೆ ತಡೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News