ಪೈರಿಗೆ ನೀರು

Update: 2018-04-06 18:51 GMT

ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.

ಕ್ರಿಯೆಗೆ ಅರಿವು ಬೇಕೆಂಬಲ್ಲಿ ಉಭಯವನರಿದು ಘಟಿಸಬೇಕು.
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?
ಕ್ರಿಯೆ ಬಿಡಲಿಲ್ಲ, ಅರಿವ ಮರೆಯಲಿಲ್ಲ.
ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ?
ಫಲವ ಹೊತ್ತ ಪೈರಿನಂತೆ, ಪೈರನೊಳಕೊಂಡ ಫಲದಂತೆ,
ಅರಿವು ಆಚರಣೆಯಲ್ಲಿ ನಿಂದು,
ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ.

                                                         -ಒಕ್ಕಲಿಗ ಮುದ್ದಣ್ಣ

  ಜೋಳದಹಾಳದ ಒಕ್ಕಲಿಗ ಮುದ್ದಣ್ಣ ಬಸವಣ್ಣನವರ ಸಮಕಾಲೀನ ಶರಣ. ಕೃಷಿಕಾಯಕದ ಮೂಲಕ ಜಂಗಮ ದಾಸೋಹ ನಡೆಸಿದಾತ. ಕೃಷಿಯ ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರುತ್ತಾನೆ. ಪೈರಿಗೆ ಎಷ್ಟು ಬೇಕೋ ಅಷ್ಟೇ ನೀರು ಬಿಡಬೇಕು. ಕಡಿಮೆ ನೀರು ಬಿಟ್ಟರೆ ಪೈರು ಒಣಗುವುದು. ಹೆಚ್ಚಿಗೆ ನೀರು ಬಿಟ್ಟರೆ ಎರೆಭೂಮಿ ಸವುಳಾಗಿ ಪೈರು ಕೊಳೆಯುವುದು. ಅರಿವಿಲ್ಲದ ಕ್ರಿಯೆಯಿಂದಾಗಿ ಇಂಥ ಸಮಸ್ಯೆಗಳು ಉದ್ಭವಿಸುತ್ತವೆ. ನಮ್ಮ ಕ್ರಿಯೆಗೆ ಅರಿವು ಬೇಕೆಂದರೆ ಕ್ರಿಯೆ ಮತ್ತು ಅರಿವಿನ ಸಂಬಂಧವನ್ನು ಅರ್ಥೈಸಿಕೊಂಡು ಅವು ಪರಿಪೂರ್ಣವಾಗಿ ಒಂದಾಗುವಂತೆ ಮಾಡಬೇಕು. ಮಡಿಯ ಏರಿಯ ಸಾಮರ್ಥ್ಯದಷ್ಟೇ ನೀರಿನ ಸದುಪಯೋಗ ಮಾಡಿಕೊಂಡರೆ ನೀರಿನ ಕೊರತೆ ಉಂಟಾಗುವುದಿಲ್ಲ ಮತ್ತು ಪೈರಿಗೂ ತೊಂದರೆಯಾಗುವುದಿಲ್ಲ. ಕರ್ತವ್ಯವನ್ನು ಅರಿವಿನೊಂದಿಗೆ ಪಾಲನೆ ಮಾಡುವುದರಿಂದ ಯಾವುದೇ ರೀತಿಯ ಹಾನಿ ಸಂಭವಿಸದೆ ಸುಖವಾಗಿರಬಹುದು. ಆದರೆ ಅರಿವು ಮತ್ತು ಕ್ರಿಯೆ ಒಂದಾಗದಿದ್ದರೆ ದುಃಖವು ಕಟ್ಟಿಟ್ಟ ಬುತ್ತಿ. ಬೀಜ ಸಂಗ್ರಹಿಸಲು, ಗೊಬ್ಬರ ತಯಾರಿಸಲು ಮತ್ತು ಕೀಟಗಳ ಹಾವಳಿಯನ್ನು ತಪ್ಪಿಸಲು ನಮ್ಮ ಪೂರ್ವಜರು ಯಾವ ಯಾವ ಕ್ರಮ ಕೈಗೊಳ್ಳುತ್ತಿದ್ದರು ಎಂಬುದನ್ನು ಮರೆತಾಗ ದುರಂತಗಳು ಸಂಭವಿಸುತ್ತವೆ. ಹಿಂದಿನ ಕಾಲದ ನಮ್ಮ ರೈತರು ಅತಿ ಆಸೆಯಿಂದ ಗತಿಗೆಟ್ಟವರಾಗಿರಲಿಲ್ಲ. ಕಂಬಾರ, ಕುಂಬಾರ, ಹಡಪದ, ಮಡಿವಾಳ, ಬಡಗಿ ಮುಂತಾದ 12 ಮಂದಿ ಆಯಗಾರರ ಕುಟುಂಬಗಳಿಗೂ ಆಹಾರಧಾನ್ಯ ಪೂರೈಸುತ್ತ, ಇದ್ದುದರಲ್ಲೇ ಸಂತೃಪ್ತಿಯಿಂದ ಬದುಕುವವರಾಗಿದ್ದರು. ಇಂಥ ಸರಳ ಸಹಜ ಕೃಷಿ ಸಂಸ್ಕೃತಿಗೆ ಹತ್ತು ಸಾವಿರ ವರ್ಷಗಳ ಇತಿಹಾಸವಿದೆ. (ಕೃಷಿ ಸಂಸ್ಕೃತಿಯೇ ಋಷಿ ಸಂಸ್ಕೃತಿಗೆ ಮೂಲ ಎಂದು ಘನ ವಿದ್ವಾಂಸರಾದ ಪ್ರೊ. ಎ.ಎಸ್. ಹಿಪ್ಪರಗಿ ಅವರು ಹೇಳುತ್ತಾರೆ.) ಬೆಳೆಯನ್ನು ಕೊಯ್ದಮೇಲೆ ಹೊಲ ಕಾಯಬೇಕಿಲ್ಲ. ಆದರೆ ಬೆಳೆ ಕೊಯ್ಯುವವರೆಗೆ ಕ್ರಿಯೆ ಮತ್ತು ಅರಿವು ಒಂದಾಗಿರಬೇಕಾಗುತ್ತದೆ ಎಂದು ಮುದ್ದಣ ತಿಳಿಸುತ್ತಾನೆ. ಫಲವನ್ನು ಹೊತ್ತ ಪೈರಿನ ಹಾಗೆ, ಪೈರಿನೊಂದಿಗಿನ ಫಲದ ಹಾಗೆ. ಅರಿವು ಆಚರಣೆಯಲ್ಲಿ ಇರಬೇಕು; ಆಚರಣೆ ಅರಿವಿಗೆ ಅಂಟಿಕೊಂಡಿರಬೇಕು. ಈ ಸಾಧನೆ ಮಾಡಿದಾತ ಶಿವಸ್ವರೂಪಿಯೇ ಆಗುವನು.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News