ಅನುಮತಿ ಕೋರಿದ್ದ ಯುವಕನ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Update: 2018-04-07 09:28 GMT

ಲಕ್ನೋ, ಎ.7:  ತನ್ನ ಬಾರಾತ್ ಅಥವಾ ವಿವಾಹ ದಿಬ್ಬಣ ಮೆರವಣಿಗೆಗೆ ಅನುಮತಿ ಕೋರಿ ಉತ್ತರ ಪ್ರದೇಶದ ಹೈಕೋರ್ಟಿನ ಮೊರೆ ಹೋದ ದಲಿತ ಯುವಕನೊಬ್ಬನ ಅಪೀಲನ್ನು ತಿರಸ್ಕರಿಸಿರುವ ಹೈಕೋರ್ಟ್ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಸಲಹೆ ನೀಡಿದೆ.

ತಮ್ಮ ಗ್ರಾಮವಾದ ಕಸ್ಗಂಜ್ ನಲ್ಲಿ ವಿವಾಹದ ಮೆರವಣಿಗೆ ನಡೆಸಲು ಮೇಲ್ವರ್ಗದ ಠಾಕೂರರು ಅನುಮತಿಸುತ್ತಿಲ್ಲವೆಂದು ದಲಿತ ಯುವಕ  ಸಂಜಯ್ ಕುಮಾರ್ ಮತ್ತು ಅವರನ್ನು ವಿವಾಹವಾಗಲಿರುವ ಶೀತಲ್ ಆರೋಪಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಈ ವಿಚಾರವಾಗಿ ಎರಡೂ ಕಡೆಗಳಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಮದುವೆಯನ್ನು ವಧುವಿನ ನಿವಾಸದಿಂದ ಕೇವಲ 80 ಮೀಟರ್ ದೂರದಲ್ಲಿರುವ ತೆರೆದ ಮೈದಾನದಲ್ಲಿ ನಡೆಸಿದಲ್ಲಿ ದಿಬ್ಬಣ ಮೆರವಣಿಗೆ ನಡೆಸುವುದು ತಪ್ಪುತ್ತದೆ ಎಂದು ಠಾಕೂರರು ಸಲಹೆ ನೀಡಿದ್ದಾರೆನ್ನಲಾಗಿದೆ.

ಗ್ರಾಮದ ಮುಖಾಂತರ ಮೆರವಣಿಗೆ ಸಾಗುವಂತಿಲ್ಲ. ಆದರೂ ಮುಂದುವರಿದಲ್ಲಿ ಪರಿಸ್ಥಿತಿ ನೆಟ್ಟಗಾಗಿರುವುದಿಲ್ಲ. ಇದು ನಮ್ಮ ಸರಕಾರ, ನಿಮ್ಮ ಮಾತನ್ನು ಯಾರೂ ಕೇಳುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆಂದು ಶೀತಲ್ ಆರೋಪಿಸಿದ್ದಾರೆ. ಗ್ರಾಮದ ಶೇ 90ರಷ್ಟು ಜನಸಂಖ್ಯೆ ಠಾಕೂರರದ್ದಾಗಿದ್ದರೆ, ಶೇ 10ರಷ್ಟು ಜನಸಂಖ್ಯೆ ದಲಿತರದ್ದಾಗಿದೆ.

ತಮ್ಮ ಸಮಸ್ಯೆಯ ಕುರಿತು ಸಂಜಯ್ ಕುಮಾರ್ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಆನ್‍ಲೈನ್ ದೂರು ಕೂಡ ದಾಖಲಿಸಿದ್ದು, ಸತತ ಪೊಲೀಸ್ ಠಾಣೆಗೆ ತೆರಳುತ್ತಿದ್ದರೂ ಸಮಸ್ಯೆ ಪರಿಹಾರ ಕಂಡಿಲ್ಲ. "ಶೀತಲ್ ಗೆ 18 ತುಂಬಲು ಇನ್ನೆರಡು ತಿಂಗಳು ಬಾಕಿಯಿದೆ ಎಂದು ಜಿಲ್ಲಾ ನ್ಯಾಯಾಧೀಶರು ಹೇಳುತ್ತಿದ್ದಾರೆ. ದಾಖಲೆಗಳನ್ನು ತಿರುಚಲಾಗುತ್ತಿದೆ ಎಂಬ ಶಂಕೆಯಿದೆ. ಹಾಗಾದರೂ ನಾನು ಎರಡು ತಿಂಗಳು ಕಾಯಲು ಸಿದ್ಧನಿದ್ದೇನೆ. ಆದರೆ ಮೆರವಣಿಗೆ ನಡೆಸುವ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ" ಎಂದು ಸಂಜಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News