ಕೃಷ್ಣಮೃಗಗಳ ಬೇಟೆ ಪ್ರಕರಣ: ಸಲ್ಮಾನ್ ಖಾನ್ ಗೆ ಜಾಮೀನು

Update: 2018-04-07 16:54 GMT

ಜೋಧ್‌ಪುರ, ಎ. 6: ಕೃಷ್ಣಮೃಗ ಬೇಟೆಯ 20 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ರಾಜಸ್ಥಾನದ ಜೋಧ್ ಪುರ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

‘ಹಮ್ ಸಾಥ್ ಸಾಥ್ ಹೈ’ ಚಲನಚಿತ್ರದ ಚಿತ್ರೀಕರಣದ ವೇಳೆ ಜೋಧ್‌ಪುರ ಸಮೀಪದ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಜೋಧ್‌ಪುರ ನ್ಯಾಯಾಲಯ ಸಲ್ಮಾನ್‌ಖಾನ್‌ಗೆ 5 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು. ಅಂದು ಸಲ್ಮಾನ್ ಖಾನ್ ಜೊತೆಗೆ ಇದ್ದ ಸಹ ನಟರಾದ ಸೈಫ್ ಅಲಿ ಖಾನ್, ಟಬು, ನೀಲಂ ಕೊಠಾರಿ ಹಾಗೂ ಸೋನಾಲಿ ಬೇಂದ್ರೆಯವರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. 50 ಸಾವಿರ ರೂ. ಬಾಂಡ್, ಇಬ್ಬರು ವ್ಯಕ್ತಿಗಳಿಂದ ತಲಾ 25 ಸಾವಿರ ರೂ. ಶ್ಯೂರಿಟಿ ನೀಡುವಂತೆ ನ್ಯಾಯಾಲಯ ಸಲ್ಮಾನ್ ಖಾನ್‌ಗೆ ನಿರ್ದೇಶಿಸಿದೆ ಹಾಗೂ ಅನುಮತಿ ಇಲ್ಲದೆ ದೇಶ ತ್ಯಜಿಸದಂತೆ ಹಾಗೂ ಮೇ 7ರಂದು ಇನ್ನೊಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.

ಪ್ರಾಸಿಕ್ಯೂಶನ್ ಪರ ವಕೀಲ ಹಾಗೂ ಪ್ರತಿವಾದಿ ಪರ ವಕೀಲರ ಒಂದು ಗಂಟೆ ವಾದ-ಪ್ರತಿವಾದವನ್ನು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಷಿ ಆಲಿಸಿದರು ಹಾಗೂ ಶನಿವಾರ ಅಪರಾಹ್ನ 3 ಗಂಟೆಗೆ ಸಲ್ಮಾನ್ ಖಾನ್‌ಗೆ ಜಾಮೀನು ನೀಡಿ ತೀರ್ಪು ಘೋಷಿಸಿದರು. ಸಲ್ಮಾನ್ ಖಾನ್ ಸಹೋದರಿಯರಾದ ಅಲ್ವಿರಾ ಹಾಗೂ ಅರ್ಪಿತಾ ನ್ಯಾಯಾಲಯದಲ್ಲಿ ಇದ್ದರು. ಜೋಧ್‌ಪುರದ ನ್ಯಾಯಾಲಯ ಗುರುವಾರ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಬಳಿಕ ಸಲ್ಮಾನ್‌ಖಾನ್ ಎರಡು ರಾತ್ರಿಯನ್ನು ಜೋಧ್‌ಪುರ ಕೇಂದ್ರ ಕಾರಾಗೃಹದಲ್ಲಿ ಕಳೆದಿದ್ದಾರೆ. ವಿಚಾರಣೆ ಸಂದರ್ಭ ಸಾಕ್ಷಿಗಳ ವಿಶ್ವಾಸಾರ್ಹತೆ ಹಾಗೂ ಕೃಷ್ಣಮೃಗದ ಕಳೇಬರದಲ್ಲಿ ಗುಂಡಿನ ಗಾಯ ಇತ್ತು ಎಂದು ಹೇಳುವ ಮರಣೋತ್ತರ ವರದಿಯ ಆಧಾರದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರು ಮಾತನಾಡಿದರು.

ಆದಾಗ್ಯೂ, ಸಲ್ಮಾನ್ ಖಾನ್ ಪರ ವಕೀಲ ಮಹೇಶ್ ಬೋರಾ, ಈ ಪ್ರಕರಣದಲ್ಲಿ ಹಲವು ಲೋಪದೋಷಗಳಿವೆ ಹಾಗೂ ಯಾವುದೇ ಪ್ರಕರಣದಲ್ಲಿ ಸಲ್ಮಾನ್ ಖಾನ್ ಶಸ್ತ್ರಾಸ್ತ್ರ ಬಳಸಿದ್ದಾರೆ ಎಂಬುದನ್ನು ತನಿಖೆ ರುಜುವಾತು ಮಾಡಿಲ್ಲ ಎಂದರು. ಕೃಷ್ಣಮೃಗದ ಎಲುಬನ್ನು ಮಾತ್ರ ಪರಿಶೀಲನೆಗೆ ಕಳುಹಿಸಿ ಕೊಡಲಾಗಿದೆ. ಆದರ ಚರ್ಮ ನಿರ್ಣಾಯಕವಾಗಿದ್ದರೂ ಕಳುಹಿಸಿ ಕೊಡಲಿಲ್ಲ ಎಂದು ಮಹೇಶ್ ಬೋರಾ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News