ಅನಾರೋಗ್ಯ ಪೀಡಿತ ತಾಯಿಯ ಆಕ್ಸಿಜನ್ ಸಿಲಿಂಡರನ್ನು ಹೆಗಲಲ್ಲಿ ಹೊತ್ತು ನಿಂತ ಪುತ್ರ!

Update: 2018-04-07 10:55 GMT

ಆಗ್ರಾ, ಎ.7: ವ್ಯಕ್ತಿಯೊಬ್ಬ ತನ್ನ ಅನಾರೋಗ್ಯಪೀಡಿತ ತಾಯಿಯನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಗಾಗಿ ಕಾಯುತ್ತಿದ್ದಾಗ ಆಕೆಯ ಆಮ್ಲಜನಕ ಸಿಲಿಂಡರನ್ನು ತನ್ನ ಹೆಗಲಲ್ಲಿಯೇ ಹೊತ್ತು ನಿಂತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ  ಘಟನೆ  ಉತ್ತರ ಪ್ರದೇಶದ ಆಗ್ರಾ ಎಸ್ ಎನ್  ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆಯೆನ್ನಲಾಗಿದೆ.

ರುಣಕ್ತ ಗ್ರಾಮದ ಅಂಗುರಾ ದೇವಿ ಎಂಬ  ಮಹಿಳೆ ತನ್ನ ಆಮ್ಲಜನಕ ಮಾಸ್ಕ್ ನೊಂದಿಗೆಯೇ ಆಸ್ಪತ್ರೆಯ ಆವರಣದಲ್ಲಿ ನಿಂತಿರುವುದು ಹಾಗೂ ಪಕ್ಕದಲ್ಲಿ ಆಮ್ಲಜನಕ ಸಿಲಿಂಡರ್ ಹೊತ್ತಿರುವ ಆಕೆಯ ಪುತ್ರ ನಿಂತಿರುವುದು ಚಿತ್ರದಲ್ಲಿ ಕಾಣಿಸುತ್ತದೆ.

ವರದಿಗಳ ಪ್ರಕಾರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಂಗರಾದೇವಿಯನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತುರ್ತು ಚಿಕಿತ್ಸೆ ನೀಡಿದ ಬಳಿಕ ಸಂಬಂಧಿತ ವಾರ್ಡ್ ಗೆ ತೆರಳಲು ಆ್ಯಂಬುಲೆನ್ಸ್ ಗಾಗಿ ಹೊರಗಡೆ ಕಾಯುವಂತೆ ಹೇಳಲಾಯಿತು. ಆಸ್ಪತ್ರೆಯ ಟ್ರಾಮಾ ಘಟಕ ಮತ್ತು ವಾರ್ಡ್ ಸಾಕಷ್ಟು ದೂರದಲ್ಲಿದೆಯೆನ್ನಲಾಗಿದೆ. ಆದರೆ ತಾಯಿ ಮಗ ಆ್ಯಂಬುಲೆನ್ಸ್ ಗಾಗಿ ಬಹಳ ಹೊತ್ತು ಕಾದರೂ ಅದು ಬಂದಿರಲಿಲ್ಲ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಾದ ಔಷಧಿಗಳು ಹಾಗೂ ಸ್ಟ್ರೆಚರ್ ಗಳ ಕೊರತೆಯಿದೆಯೆಂಬ ದೂರುಗಳಿದ್ದರೂ ಆಸ್ಪತ್ರೆಯ ಅಧಿಕಾರಿಗಳು ಅದನ್ನು ನಿರಾಕರಿಸಿದ್ದು ಈ ನಿರ್ದಿಷ್ಟ ಘಟನೆಯ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ರೋಗಿಯನ್ನು ವಾರ್ಡ್ ಗೆ ಸ್ಥಳಾಂತರಿಸುವಾಗ ಸ್ವಲ್ಪ ಹೊತ್ತು ಕಾಯಲು ಹೇಳಲಾಗಿತ್ತು ಆಗ ಮಾಧ್ಯಮಗಳು ಫೋಟೋ ಕ್ಲಿಕ್ಕಿಸಿದ್ದವು ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News