ಬಿಜೆಪಿ ಸ್ಥಾಪನಾ ದಿನದ ಪೋಸ್ಟರ್ ಗಳಲ್ಲಿ ಮಹಾಜನ್, ಮುಂಢೆ ನಾಪತ್ತೆ: ಆಕ್ರೋಶಿತ ಕಾರ್ಯಕರ್ತರಿಂದ ಪ್ರತಿಭಟನೆ

Update: 2018-04-07 11:51 GMT

ಮುಂಬೈ, ಎ. 7: ಬಿಜೆಪಿಯ ಸ್ಥಾಪನಾ ದಿನವಾದ ಶುಕ್ರವಾರ ಪಕ್ಷಕ್ಕೆ ಮುಜುಗರ ಸೃಷ್ಟಿಸುವ ಬೆಳವಣಿಗೆಯೊಂದು ನಡೆದಿದೆ. ಸ್ಥಾಪನಾ ದಿನಾಚರಣೆಯ ಅಂಗವಾಗಿ ಮುಂಬೈ ರ್ಯಾಲಿಗಾಗಿ ಅಳವಡಿಸಲಾಗಿದ್ದ ಪೋಸ್ಟರುಗಳಲ್ಲಿ ಹಿರಿಯ ನಾಯಕರುಗಳಾದ ಪ್ರಮೋದ್ ಮಹಾಜನ್ ಮತ್ತು ಗೋಪಿನಾಥ್ ಮುಂಢೆ ಅವರ ಪೋಸ್ಟರುಗಳು ಕಾಣಿಸುತ್ತಿಲ್ಲವೆಂದು ಸಿಟ್ಟುಗೊಂಡು ಹಲವು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮಹಾಜನ್ ಹಾಗೂ ಮುಂಢೆ ಅವರ ಪೋಸ್ಟರುಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಪ್ರತಿಭಟಿಸಿದ ಹಲವು ಬಿಜೆಪಿ ಕಾರ್ಯಕರ್ತರು ಮರಾಠವಾಡ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ.

ರ್ಯಾಲಿಗಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದನ್ವೆ, ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲರ್ ಅವರು ಪೋಸ್ಟರುಗಳು ವೇದಿಕೆಯನ್ನು ಅಲಂಕರಿಸಿದ್ದವು.

ಹಲವಾರು ಹಿರಿಯ ನಾಯಕರುಗಳಾದ ಮಾಜಿ ಪ್ರಧಾನಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರ ಪೋಸ್ಟರುಗಳಿದ್ದರೂ ಮಹಾರಾಷ್ಟ್ರದಲ್ಲಿ ಬಿಜೆಪಿಯ ಬೆಳವಣಿಗೆಗೆ ಪ್ರಮುಖ ಕಾರಣರಾಗಿದ್ದ ಪ್ರಮೋದ್ ಮಹಾಜನ್ ಹಾಗೂ ಗೋಪಿನಾಥ್ ಮುಂಡೆ ಅವರ ಪೋಸ್ಟರುಗಳು ಮಾತ್ರ ಎಲ್ಲೂ ಇರಲಿಲ್ಲ.

ಪ್ರತಿಭಟನೆ ಹೆಚ್ಚುತ್ತಿದ್ದಂತೆಯೇ ಗೋಪಿನಾಥ್ ಮುಂಢೆ ಅವರ ಪುತ್ರಿ ಪ್ರೀತಂ ಮುಂಢೆ ಅವರಿಗೆ ಪ್ರತಿಭಟನಕಾರರ ಮನವೊಲಿಸುವ ಕೆಲಸವನ್ನು ವಹಿಸಲಾಯಿತು. ಪ್ರೀತಂ ಪ್ರಯತ್ನದ ಫಲವಾಗಿ ಕಾರ್ಯಕರ್ತರು ತಮ್ಮ ಪ್ರತಿಭಟನೆ ಕೈಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News