ಉ.ಪ್ರದೇಶದಲ್ಲಿ ದಲಿತ ಯುವಕನ ಹತ್ಯೆ: ಗ್ರಾಮ ತೊರೆಯುತ್ತಿರುವ ದಲಿತರು

Update: 2018-04-07 14:15 GMT

ಮೀರತ್, ಎ.7: ಎಪ್ರಿಲ್ 2ರಂದು ವಿವಿಧ ದಲಿತ ಸಂಘಟನೆಗಳು ನಡೆಸಿದ ಭಾರತ್ ಬಂದ್ ವೇಳೆ ದಲಿತರನ್ನು ಸಂಘಟಿಸಿ ಬಂದ್ ಯಶಸ್ವಿಗೊಳಿಸಿದ್ದ ಉ.ಪ್ರದೇಶದ ಶೋಭಾಪುರದ 28ರ ಹರೆಯದ ಗೋಪಿ ಪಾರ್ಯ ಎಂಬ ದಲಿತ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಘಟನೆಯಿಂದ ಆಘಾತಕ್ಕೀಡಾಗಿರುವ ದಲಿತ ಸಮುದಾಯದ ಹಲವರು ಗ್ರಾಮ ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.

ಭಾರತ್ ಬಂದ್ ವೇಳೆ ಶೋಭಾಪುರದಲ್ಲಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ 83 ದಲಿತ ಯುವಕರ ಹೆಸರುಗಳುಳ್ಳ ಹಿಟ್ ಲಿಸ್ಟನ್ನು ಸಿದ್ಧಪಡಿಸಲಾಗಿದೆ. ಇದನ್ನು ಮೇಲ್ಜಾತಿಗೆ ಸೇರಿದ ವ್ಯಕ್ತಿಗಳೇ ತಯಾರಿಸಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಹೆಸರು ಗೋಪಿ ಪಾರ್ಯ ಅವರದ್ದು.

 ಶೋಭಾಪುರದಲ್ಲಿ ಗೋಪಿ ಪಾರ್ಯ ದಲಿತರ ಮಧ್ಯೆ ಜನಪ್ರಿಯರಾಗುತ್ತಿರುವುದನ್ನು ಸಹಿಸದ ಮೇಲ್ಜಾತಿಯವರು ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈಗ ಈ ಪಟ್ಟಿಯಲ್ಲಿ ಹೆಸರಿರುವ ಬಹುತೇಕ ಎಲ್ಲ ಯುವಕರು ಗ್ರಾಮ ಬಿಟ್ಟು ಬೇರೆ ಕಡೆ ಅವಿತುಕೊಂಡಿದ್ದಾರೆ. ಇದೀಗ ಈ ಪಟ್ಟಿಯನ್ನು ಪೊಲೀಸರಿಗೆ ನೀಡಲಾಗಿದೆ. ಆದರೆ ದಲಿತರ ಭಯ ಕಡಿಮೆಯಾಗಿಲ್ಲ ಎಂದು 41ರ ಹರೆಯದ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಇಂಥ ಉದ್ವಿಗ್ನ ಪರಿಸ್ಥಿತಿಯ ಮಧ್ಯೆಯೂ ಕೆಲವು ಯುವಕರು ಇನ್ನೂ ಗ್ರಾಮದಲ್ಲೇ ಉಳಿದಿದ್ದು ಎಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಆಚರಿಸಿದ ನಂತರವೇ ಗ್ರಾಮ ತೊರೆಯುವುದಾಗಿ ನಿರ್ಧರಿಸಿದ್ದಾರೆ. ಗೋಪಿ ಪರ್ಯಾ ಹತ್ಯೆ ಮತ್ತು ಅನೇಕ ಯುವಕರು ಊರು ಬಿಟ್ಟಿರುವುದರಿಂದ ಈ ಬಾರಿಯ ಅಂಬೇಡ್ಕರ್ ಜಯಂತಿ ಹಿಂದಿನಂತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಗೋಪಿ ಪಾರ್ಯ ಮೇಲೆ ಐದು ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಆರೋಪಿಗಳಾದ ಮನೋಜ್ ಗುಜ್ಜರ್, ಆಶಿಶ್ ಗುಜ್ಜರ್, ಕಪಿಲ್ ರಾಣಾ ಮತ್ತು ಗಿರಿಧರ್ ಎಂಬವರನ್ನು ಬಂಧಿಸಲಾಗಿದೆ. ಇವರ ಮೇಲೆ ಐಪಿಸಿ ಸೆಕ್ಷನ್ 302 (ಹತ್ಯೆ), 504 ಶಾಂತಿ ಕದಡಲು ಯತ್ನ) ಮತ್ತು 506 (ಬೆದರಿಕೆ) ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಿ ತಂದೆ ತಾರಾಚಂದ್ ಬಹುಜನ ಸಮಾಜ ಪಕ್ಷದ ಸದಸ್ಯರಾಗಿದ್ದು ಗೋಪಿ ಕೂಡಾ ಬಿಎಸ್ಪಿ ಕಾರ್ಯಕರ್ತರಾಗಿದ್ದರು. ಅವರ ಸಹೋದರ 24ರ ಹರೆಯದ ಪ್ರಶಾಂತ್ ಹೆಸರು ಕೂಡಾ ಹಿಟ್ ಲಿಸ್ಟ್‌ನಲ್ಲಿದ್ದು, ಐದನೇ ಸ್ಥಾನದಲ್ಲಿದೆ.

ಶೋಭಾಪುರದಲ್ಲಿ ಕಳೆದ ಮೂರು ದಶಕಗಳಿಂದ ದಲಿತರು ಮತ್ತು ಮೇಲ್ಜಾತಿಯವರ ಮಧ್ಯೆ ಸಂಘರ್ಷ ನಡೆಯುತ್ತಿದ್ದರೂ ಈ ಹಂತಕ್ಕೆ ಎಂದೂ ತಲುಪಿರಲಿಲ್ಲ ಎಂದು ತಾರಾಚಂದ್ ತಿಳಿಸಿದ್ದಾರೆ. ಶೋಭಾಪುರದಲ್ಲಿ ಹಲವು ಗಲಭೆಗಳು ನಡೆದಿವೆ. ಈ ಸಂದರ್ಭದಲ್ಲಿ ಚೂರಿ ಇರಿತಗಳು ನಡೆದ ಉದಾಹರಣೆಗಳಿವೆ. ಆದರೆ ಈ ರೀತಿ ಬರ್ಬರವಾಗಿ ಹತ್ಯೆ ಮಾಡಿರುವುದು ಇದೇ ಮೊದಲು ಎಂದು ದುಃಖತಪ್ತ ತಾರಾಚಂದ್ ತಿಳಿಸಿದ್ದಾರೆ.

ಎಸ್ಸಿ/ಎಸ್ಟಿ ಕಾಯ್ದೆಯಲ್ಲಿ ಸಡಿಲಿಕೆ ಮಾಡಿದ ನ್ಯಾಯಾಲಯದ ಆದೇಶದ ವಿರುದ್ಧ ವಿವಿಧ ದಲಿತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಈ ವೇಳೆ ಹಲವೆಡೆ ಹಿಂಸಾಚಾರಗಳು ಭುಗಿಲೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News