ಉತ್ತರ ಪ್ರದೇಶ: ಕಡಿಮೆ ರೇಶನ್ ನೀಡಿದ್ದನ್ನು ವಿರೋಧಿಸಿದ 75ರ ವೃದ್ಧೆಯ ಥಳಿಸಿ ಹತ್ಯೆ

Update: 2018-04-07 14:28 GMT

ಮುಝಫರ್‌ನಗರ, ಎ.7: ರೇಶನ್ ಅಂಗಡಿಯಲ್ಲಿ ಕಡಿಮೆ ಆಹಾರ ಧಾನ್ಯ ನೀಡಿದ್ದನ್ನು ವಿರೋಧಿಸಿದ 75ರ ಹರೆಯದ ವೃದ್ಧೆಯನ್ನು ರೇಶನ್ ಅಂಗಡಿಯ ಮಾಲಕ ಥಳಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಮುಝಫರ್‌ನಗರದಲ್ಲಿ ನಡೆದಿದೆ.

ಘಟನೆಗೆ ಸಂಬಂಧಪಟ್ಟಂತೆ ಮಹಿಳೆಯ ಪುತ್ರ ನೀಡಿದ ದೂರಿನಂತೆ ಪೊಲೀಸರು ರೇಶನ್ ಅಂಗಡಿ ಮಾಲಕ ನಸೀಮ್ ಹಾಗೂ ಶಮೀಮ್ ಮತ್ತು ಜಾನು ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮುಹಮ್ಮದ್ ರಿಝ್ವಾನ್ ತಿಳಿಸಿದ್ದಾರೆ.

ಶುಕ್ರವಾರದಂದು ಫಿರೋಝಾಬಾದ್ ನಿವಾಸಿ ವೃದ್ಧೆ ಆಸಿ ರೇಶನ್ ತರಲೆಂದು ಅಂಗಡಿಗೆ ತೆರಳಿದ್ದರು. ಈ ವೇಳೆ ಅಂಗಡಿ ಮಾಲಕ ಕಡಿಮೆ ರೇಶನ್ ನೀಡಿದ್ದು ಇದನ್ನು ವೃದ್ಧೆ ವಿರೋಧಿಸಿದ್ದರು. ಈ ವೇಳೆ ಆಕೆಗೆ ಅಂಗಡಿ ಮಾಲಕ ಇತರ ಇಬ್ಬರು ಆರೋಪಿಗಳ ಜೊತೆ ಸೇರಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು ಸ್ಥಳೀಯರು ಮೃತದೇಹವನ್ನು ಪೊಲೀಸರಿಗೊಪ್ಪಿಸಲು ಕೆಲವು ಗಂಟೆಗಳ ಕಾಲ ನಿರಾಕರಿಸಿದರು. ಅಂತಿಮವಾಗಿ ವೃದ್ಧೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News