2017-18ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಲ್ಲಿ 1,498 ದೂರುಗಳು
ಹೊಸದಿಲ್ಲಿ,ಎ.7: 2017-18ನೇ ಸಾಲಿನಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (ಎನ್‌ಸಿಎಂ)ವು 1,498 ದೂರುಗಳನ್ನು ಸ್ವೀಕರಿಸಿದ್ದು, ಇದು ನಾಲ್ಕು ವರ್ಷಗಳ ಹಿಂದೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಕನಿಷ್ಠ ಸಂಖ್ಯೆಯಾಗಿದೆ. ಈ ಪೈಕಿ 1,263 ದೂರುಗಳನ್ನು ಆಯೋಗವು ವಿಲೇವಾರಿಗೊಳಿಸಿದೆ.
ಕಳೆದ ಹಣಕಾಸು ವರ್ಷದಲ್ಲಿ ಸಲ್ಲಿಕೆಯಾಗಿರುವ ಈ ದೂರುಗಳ ಪೈಕಿ ಅತ್ಯಂತ ಹೆಚ್ಚಿನ ದೂರುಗಳು(1,128) ದೇಶದಲ್ಲಿ ಜನಸಂಖ್ಯೆಗನುಗುಣವಾಗಿ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಮರಿಂದ ಬಂದಿವೆ.
ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅತ್ಯಂತ ಸಣ್ಣದಾಗಿರುವ ಪಾರ್ಸಿಗಳಿಂದ ಕೇವಲ ಮೂರು ದೂರುಗಳು ದಾಖಲಾಗಿವೆ. ಕ್ರೈಸ್ತರು, ಸಿಕ್ಖರು, ಜೈನರು ಮತ್ತು ಬೌದ್ಧರು ಅನುಕ್ರಮವಾಗಿ 100, 83, 48 ಮತ್ತು 22 ದೂರುಗಳನ್ನು ದಾಖಲಿಸಿದ್ದರೆ, 114 ದೂರುಗಳು ಅಲ್ಪಸಂಖ್ಯಾತರೇತರ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಂದ ಸಲ್ಲಿಸಲ್ಪಟ್ಟಿವೆ ಎಂದು ಆಯೋಗವು ತಿಳಿಸಿದೆ.
ಒಟ್ಟು ದೂರುಗಳ ಪೈಕಿ 877 ದೂರುಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದರೆ, ಸೇವೆ, ಶಿಕ್ಷಣ, ಧಾರ್ಮಿಕ ಹಕ್ಕುಗಳು ಮತ್ತು ವಕ್ಫ್ ವಿಷಯಗಳಿಗೆ ಸಂಬಂಧಿಸಿದಂತೆ ಅನುಕ್ರಮವಾಗಿ 128, 93, 56 ಮತ್ತು 54 ದೂರುಗಳು ದಾಖಲಾ ಗಿವೆ. ಇವುಗಳಿಗೆ ಹೊರತಾದ ವಿಷಯಗಳಿಗೆ ಸಂಬಂಧಿಸಿದಂತೆ 275 ದೂರುಗಳನ್ನು ಆಯೋಗವು ಸ್ವೀಕರಿಸಿದೆ.
ಕಳೆದ ವರ್ಷ ಆಯೋಗದಲ್ಲಿ ದಾಖಲಾದ ದೂರುಗಳ ಸಂಖ್ಯೆ ಕಡಿಮೆಯಾಗಿದೆ ಯಾದರೂ, ಹೆಚ್ಚು ಪ್ರಕರಣಗಳು(235) ಬಾಕಿಯುಳಿದಿವೆ. 2014-15, 2015-16 ಮತ್ತು 2016-17ರಲ್ಲಿ ಅನುಕ್ರಮವಾಗಿ 12, 15 ಮತ್ತು 45 ಪ್ರಕರಣಗಳು ಬಾಕಿಯುಳಿ ದುಕೊಂಡಿದ್ದವು.
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಉತ್ತಮ ನಿರ್ವಹಣೆಯು ಆಯೋಗದ ಬಳಿ ದಾಖಲಾಗಿರುವ ದೂರುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂದು ಎನ್‌ಸಿಎಂ ಅಧ್ಯಕ್ಷ ಸೈಯದ್ ಗೈರುಲ್ ಹಸನ್ ರಿಝ್ವಿ ಅವರು ಹೇಳಿದರು.
ಒಂದೆರಡು ರಾಜ್ಯಗಳನ್ನು ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಚೆನ್ನಾಗಿಯೇ ಇದೆ. ಆರಂಭಿಕ ಹಂತಗಳಲ್ಲಿ ದೂರವಾಣಿಯಲ್ಲಿಯೂ ನಾವು ದೂರುಗಳನ್ನು ಬಗೆಹರಿಸುತ್ತಿದ್ದೇವೆ ಎಂದರು.
ಸಂಬಂಧಿಸಿದ ಅಧಿಕಾರಿಗಳು ಸಕಾಲದಲ್ಲಿ ವಿಚಾರಣೆಗೆ ಹಾಜರಾಗದಿರುವುದು ಕಳೆದ ವರ್ಷ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿಯುಳಿದುಕೊಳ್ಳಲು ಕಾರಣವಾಗಿದೆ ಎಂದ ಅವರು, ಅಧಿಕಾರಿಗಳು ಸಕಾಲದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಡಿಕೊಳ್ಳುವಂತೆ ನಾವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಿದ್ದೇವೆ ಎಂದರು.
ಆಯೋಗವು 2014-15, 2015-16 ಮತ್ತು 2016-17ರಲ್ಲಿ ಅನುಕ್ರಮವಾಗಿ 1995, 1974 ಮತ್ತು 1647 ದೂರುಗಳನ್ನು ಸ್ವೀಕರಿಸಿತ್ತು.