ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿರುವುದೇ ಕಾಂಗ್ರೆಸ್ ಪಕ್ಷದಿಂದ: ನಾನಾ ಪಾಟೇಕರ್
ಮುಂಬೈ, ಎ.7: ಭಾರತದಲ್ಲಿ ಅನೇಕ ವರ್ಷಗಳಿಂದ ಪ್ರಜಾಪ್ರಭುತ್ವ ಜೀವಂತವಾಗಿದೆ. ಅದನ್ನು ಉಳಿಸಿಕೊಂಡು ಬಂದಿರುವ ಶ್ರೇಯ ಕೇವಲ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದು ನಟ, ಸಮಾಜ ಸೇವಕ ನಾನಾ ಪಾಟೇಕರ್ ತಿಳಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ನಿರಂತರವಾಗಿ ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೇಕರ್, ರಾಜಕಾರಣಿಗಳು ಹೇಳಿಕೆ ನೀಡುತ್ತಲೇ ಇರುತ್ತಾರೆ. ಆದರೆ ದೇಶದ ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಸುದೀರ್ಘ ವರ್ಷಗಳಿಂದ ಸುರಕ್ಷಿತವಾಗಿದೆ. ಅದರ ಶ್ರೇಯ ಕಾಂಗ್ರೆಸ್‌ಗೆ ಸಲ್ಲುತ್ತದೆ. ಇದು ಕೂಡಾ ದೊಡ್ಡ ಸಾಧನೆಯೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಾಮ್ ಎಂಬ ಸರಕಾರೇತರ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಮಾತನಾಡಿದ ನಾನಾ, ಶರದ್ ಪವಾರ್ ಅವರು ದೇಶದ ಪ್ರಧಾನಿಯಾಗಬೇಕೆಂಬುದು ನನ್ನ ಆಸೆ. ಒಬ್ಬ ಮರಾಠಿ ಹಿನ್ನೆಲೆಯ ವ್ಯಕ್ತಿ ಪ್ರಧಾನಿಯಾದರೆ ನನಗೆ ಬಹಳ ಸಂತೋಷವಾಗುತ್ತದೆ. 1996ರಲ್ಲಿ ಕರ್ನಾಟಕ ಮುಖ್ಯಮಂತ್ರಿ ದೇವೇ ಗೌಡ ಅವರು ಪ್ರಧಾನಿ ಆಯ್ಕೆಯಾದಾಗ ಪವಾರ್ ಅವರಿಗೂ ಅವಕಾಶವಿತ್ತು. ಆದರೆ ಕೂದಲೆಳೆ ಅಂತರದಲ್ಲಿ ಆ ಅವಕಾಶ ಕೈತಪ್ಪಿತ್ತು ಎಂದು ತಿಳಿಸಿದ್ದಾರೆ.