ಅತ್ಯಾಚಾರ ದೂರು ನೀಡಲು ವಿಳಂಬವಾದರೆ ಸಂತ್ರಸ್ತೆ ಸುಳ್ಳು ಹೇಳುತ್ತಿದ್ದಾರೆ ಎಂದರ್ಥವಲ್ಲ: ಬಾಂಬೆ ಹೈಕೋರ್ಟ್

Update: 2018-04-07 15:19 GMT

ಮುಂಬೈ, ಎ.7: ಅತ್ಯಾಚಾರದ ದೂರು ನೀಡಲು ವಿಳಂಬ ಮಾಡಿದ ಮಾತ್ರಕ್ಕೆ ಸಂತ್ರಸ್ತೆ ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥವಲ್ಲ. ಭಾರತೀಯ ಮಹಿಳೆಯರು ಇಂಥ ವಿಷಯಗಳಲ್ಲಿ ಸುಳ್ಳು ಆರೋಪಗಳನ್ನು ಮಾಡುವುದು ಬಹಳ ವಿರಳ ಎಂದು ಬಾಂಬೆ ಉಚ್ಚ ನ್ಯಾಯಾಲಯ ತಿಳಿಸಿದೆ.

 ಸಾಮೂಹಿಕ ಅತ್ಯಾಚಾರ ಆರೋಪದಲ್ಲಿ 2013ರಲ್ಲಿ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಸೆಶನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿಗಳಾದ ದತ್ತಾತ್ರೆಯ ಕೊರ್ಡೆ, ಗಣೇಶ್ ಪರ್ದೇಶಿ, ಪಿಂಟು ಕೊಸ್ಕರ್ ಮತ್ತು ಗಣೇಶ್ ರೊಲ್‌ನ ಮೇಲ್ಮನವಿಯನ್ನು ನ್ಯಾಯಾಧೀಶ ಎ.ಎಂ ಬದರ್ ಈ ವಾರದ ಆರಂಭದಲ್ಲಿ ತಳ್ಳಿ ಹಾಕಿದ್ದರು.

 2012ರ ಮಾರ್ಚ್ 15ರಂದು ನಾಸಿಕ್ ಜಿಲ್ಲೆಯ ತ್ರೈಂಬಕೇಶ್ವರದಿಂದ ವಾಪಸಾಗುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಗೆಳೆಯನಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಈ ನಾಲ್ವರಿಗೆ ಸೆಶನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ದೂರುದಾರ ಮಹಿಳೆ ಮತ್ತಾಕೆಯ ಗೆಳೆಯನನ್ನು ಅಸಭ್ಯ ರೀತಿಯಲ್ಲಿ ಕಂಡ ನಾವು ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದೆವು. ಹಾಗಾಗಿ ಮಹಿಳೆಯೇ ನಮ್ಮ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಗಳು ತಿಳಿಸಿದ್ದರು.

ಈ ಘಟನೆಯು ಮಾರ್ಚ್ 15ರಂದು ನಡೆದಿದ್ದರೂ ಮಹಿಳೆ ಎರಡು ದಿನಗಳ ನಂತರ ದೂರು ದಾಖಲಿಸಿದ್ದಾರೆ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿತ್ತು. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯ ವೇಳೆಯೂ ಆಕೆಯ ಮೇಲೆ ಯಾವುದೇ ಗಾಯದ ಗುರುತು ಇಲ್ಲದಿರುವ ಕಾರಣ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶದಲ್ಲಿ ಭಾರತೀಯ ಮಹಿಳೆಯರು ತಮ್ಮ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಸುಳ್ಳು ಹೇಳುವುದು ಬಹಳ ಅಪರೂಪ ಎಂದು ತಿಳಿಸಿರುವುದನ್ನು ಬೆಟ್ಟು ಮಾಡಿದ ಹೈಕೋರ್ಟ್ ಕೆಳನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News