18ರ ಮೇಲ್ಪಟ್ಟ ಅವಿವಾಹಿತ ಮಗಳು ತಂದೆಯಿಂದ ನಿರ್ವಹಣಾ ವೆಚ್ಚ ಕೇಳಬಹುದು: ಹೈಕೋರ್ಟ್

Update: 2018-04-07 15:28 GMT

ಮುಂಬೈ, ಎ.7: ಹೆತ್ತವರು ವಿಚ್ಛೇಧಿತರು ಅಥವಾ ಪ್ರತ್ಯೇಕವಾಗಿ ಜೀವಿಸುತ್ತಿದ್ದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಮಗಳು ಕೂಡಾ ನಿರ್ವಹಣಾ ವೆಚ್ಚವನ್ನು ಕೇಳಬಹುದು ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ತನ್ನ ವಯಸ್ಕ ಮಗಳ ಪರವಾಗಿ ಮಹಿಳೆ ಕೂಡಾ ನಿರ್ವಹಣಾ ವೆಚ್ಚವನ್ನು ಕೋರಿ ಮನವಿಯನ್ನು ಸಲ್ಲಿಸಬಹುದು ಎಂದು ನ್ಯಾಯಾಧೀಶೆ ಭಾರತಿ ದಂಗ್ರೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ತನ್ನ ಹತ್ತೊಂಬತ್ತರ ಹರೆಯದ ಮಗಳ ನಿರ್ವಹಣೆಗೆ ತಮ್ಮ ಪ್ರತ್ಯೇಕಗೊಂಡ ಪತಿಯಿಂದ ಹಣವನ್ನು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮನವಿಯನ್ನು ತಳ್ಳಿ ಹಾಕಿದ್ದ ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆಯು ಉಚ್ಚ ನ್ಯಾಯಾಲಯದಲ್ಲಿ ಹಾಕಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.

1988ರಲ್ಲಿ ವಿವಾಹವಾಗಿದ್ದ ಈ ದಂಪತಿ 1997ರಲ್ಲಿ ಪ್ರತ್ಯೇಕಗೊಂಡಿದ್ದರು. ಅವರ ಇಬ್ಬರು ಪುತ್ರರು ಮತ್ತು ಒಬ್ಬಳು ಪುತ್ರಿ ತಾಯಿಯ ಜೊತೆ ವಾಸಿಸುತ್ತಿದ್ದಾರೆ. ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರ ತಂದೆ ಪ್ರತಿ ತಿಂಗಳು ಅವರ ನಿರ್ವಹಣೆಗಾಗಿ ಹಣ ನೀಡುತ್ತಿದ್ದರು. ಮಗಳಿಗೆ 18 ವರ್ಷವಾಗಿದ್ದರೂ ಆಕೆ ಇನ್ನೂ ಉನ್ನತ ವ್ಯಾಸಂಗ ನಡೆಸುತ್ತಿರುವ ಕಾರಣ ತನ್ನ ಮೇಲೆಯೇ ಅವಲಂಬಿತಳಾಗಿದ್ದಾಳೆ ಎಂದು ಮಹಿಳೆ ತಿಳಿಸಿದ್ದರು.

ತನ್ನ ಇಬ್ಬರು ಪುತ್ರರಲ್ಲಿ ಒಬ್ಬ ತನ್ನ ಶಿಕ್ಷಣ ಸಾಲವನ್ನು ಮರುಪಾವತಿ ಮಾಡುತ್ತಿದ್ದರೆ ಇನ್ನೊಬ್ಬನಿಗೆ ಇನ್ನೂ ಉದ್ಯೋಗ ಸಿಕ್ಕಿಲ್ಲ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ತಿಳಿಸಿದ್ದರು. ಸದ್ಯ ಪತಿಯಿಂದ ಮಾಸಿಕ 25,000 ರೂ ಪರಿಹಾರ ಪಡೆಯುತ್ತಿರುವ ಮಹಿಳೆ ಮಗಳಿಗಾಗಿ ಹೆಚ್ಚುವರಿ 15,000 ರೂ. ನೀಡಬೇಕೆಂದು ಕೋರಿದ್ದಾರೆ. ನಿರ್ವಹಣಾ ವೆಚ್ಚವನ್ನು ಕೇವಲ ಅಪ್ರಾಪ್ತ ಮಕ್ಕಳಿಗಷ್ಟೇ ನೀಡಲು ಸಾಧ್ಯ ಎಂಬ ನೆಲೆಯಲ್ಲಿ ಕುಟುಂಬ ನ್ಯಾಯಾಲಯ ಆಕೆಯ ಅರ್ಜಿಯನ್ನು ತಳ್ಳಿಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News