ದಲಿತರ ಪ್ರತಿಭಟನೆ ಸಂದರ್ಭ ಹಿಂಸಾಚಾರ: ಬಿಜೆಪಿ ನಾಯಕನ ಸಹಿತ ಐವರ ಬಂಧನ

Update: 2018-04-07 16:31 GMT

ಭೋಪಾಲ್, ಎ.7: ಎಪ್ರಿಲ್ 2ರಂದು ದೇಶಾದ್ಯಂತ ನಡೆದ ದಲಿತರ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಭೋಪಾಲ್‌ನ ಹನುಮಾನ್‌ಗಂಜ್‌ನ ಬಿಜೆಪಿ ನಾಯಕನ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಬಿಜೆಪಿ ನಾಯಕನನ್ನು ಗಜರಾಜ್ ಜಟಾವ್ ಎಂದು ಗುರುತಿಸಲಾಗಿದ್ದು ಈತನ ಬಗ್ಗೆ ಮಾಹಿತಿ ನೀಡಿದವರಿಗೆ 10,000 ರೂ. ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು. ಸಾಮಾಜಿಕ ಜಾಲತಾಣದ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪೊಲೀಸರು ಗ್ವಾಲಿಯರ್‌ನಲ್ಲಿ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಂದ್ ವೇಳೆ ಬಿಂಡ್ ಹಾಗೂ ಮೊರೆನಾ ಪ್ರದೇಶದಲ್ಲಿ ಹಿಂಸಾಚಾರ ನಡೆಸಲು ಹಲವು ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಹಣ ನೀಡಲಾಗಿತ್ತು ಎಂದು ಪೊಲೀಸ್ ನಿರೀಕ್ಷಕ ಮಕರಂದ್ ದಿಯುಸ್ಕರ್ ತಿಳಿಸಿದ್ದಾರೆ. ಬಂದ್ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಬಹುಜನ ಸಮಾಜ ಪಕ್ಷದ ಮುಝಫರ್‌ನಗರದ ಜಿಲ್ಲಾಧ್ಯಕ್ಷ ಕಮಲ್ ಗೌತಮ್ ಮತ್ತು ಹಪುರ್‌ನ ಮಾಜಿ ಶಾಸಕ ಧರ್ಮಪಾಲ್ ಸಿಂಗ್ ಅವರ ಪುತ್ರ ಮನೀಶ್ ಸಿಂಗ್‌ರನ್ನು ಬಂಧಿಸಿದ್ದರು. ಎಸ್ಸಿ/ಎಸ್ಟಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ದಲಿತ ಸಂಘಟನೆಗಳು ಎಪ್ರಿಲ್ 2ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News