ಅರ್ಥವಾಗಲು ಕಷ್ಟವಾಗುವ ವರ್ತಮಾನ!

Update: 2018-04-07 18:42 GMT

ಸಾಮಾನ್ಯವಾಗಿ ಕನ್ನಡದ ಯಾವುದೇ ಸಿನೆಮಾ ಗಳನ್ನು ಅರ್ಧದಿಂದ ನೋಡತೊಡಗಿದರೂ ಅರ್ಥ ವಾಗುತ್ತಾ ಹೋಗುತ್ತದೆ. ಯಾಕೆಂದರೆ ಒಂದಲ್ಲ ಒಂದು ಕಡೆ ನಿರ್ದೇಶಕರು ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ಬಂದೇ ಬರುತ್ತಾರೆ. ಆದರೆ ಚಿತ್ರ ಆರಂಭಗೊಂಡು ಮಧ್ಯಂತರ ತಲುಪಿದರೂ ಅರ್ಥವಾಗದಂತೆ ಸಾಗುವ ರೀತಿ ‘ವರ್ತಮಾನ’ದ್ದು.

ಅನಂತ ಎಂಬಾತ ತನ್ನ ಸ್ನೇಹಿತರ ಜೊತೆಗೆ ಸೇರಿಕೊಂಡು ಹಣ ಸಂಪಾದನೆಗಾಗಿ ಅಡ್ಡದಾರಿ ಹಿಡಿಯುತ್ತಾನೆ. ಆದರೆ ಅಡ್ಡದಾರಿ ಹಿಡಿದು ಸಂಪತ್ತು ಪಡೆದ ಮಾತ್ರಕ್ಕೆ ಸಂತೋಷ ನಿರಂತರವಲ್ಲ ಎಂದು ತೋರಿಸುವುದೇ ವರ್ತಮಾನ. ಅಡ್ಡದಾರಿ ಹಿಡಿದ ವ್ಯಕ್ತಿ ಹುಚ್ಚನಾಗಿರುವುದನ್ನು ತೋರಿಸಲು ನಿರ್ದೇಶಕರು ಅಡ್ಡಾದಿಡ್ಡಿ ದಾರಿ ಹಿಡಿದಿದ್ದಾರೆ.ಹಾಗಾಗಿ ನೋಡುತ್ತಾ ನೋಡುತ್ತಾ ಪ್ರೇಕ್ಷಕನಿಗೇ ಹುಚ್ಚು ಹಿಡಿದಂತಾದರೆ ಅಚ್ಚರಿಯಿಲ್ಲ. ರಿವರ್ಸ್ ಚಿತ್ರಕತೆ, ಫ್ಲ್ಯಾಶ್ ಬ್ಯಾಕ್ ಮೇಲೆ ಫ್ಲ್ಯಾಶ್ ಬ್ಯಾಕ್ ಮೊದಲಾದವು ಕನ್ನಡಿಗರಿಗೆ ಹೊಸತೇನಲ್ಲ.ಉಪೇಂದ್ರರ ‘ಎ’ಚಿತ್ರದಿಂದ ಪವನ್ ನಿರ್ದೇಶನದ ‘ಲೂಸಿಯಾ’ ತನಕ ನೋಡಿ ಮೆಚ್ಚಿದ್ದಾರೆ. ಆದರೆ ಅಲ್ಲೆಲ್ಲ ಕಲರ್‌ಫುಲ್ ಹಾಡು, ಸಂಭಾಷಣೆಗಳು ಕತೆಗೆ ಬಣ್ಣ ತುಂಬಿವೆ. ಆದರೆ ಇಲ್ಲಿ ಮನಸಿನ ಅಸ್ಪಷ್ಟತೆಯನ್ನು ತೋರಿಸಲು ಹೊರಟು ದೃಶ್ಯಗಳನ್ನೇ ಅಸ್ಪಷ್ಟಗೊಳಿಸಲಾಗಿದೆ. ಖಂಡಿತವಾಗಿ ಇದು ಒಳ್ಳೆಯ ಸಂದೇಶಗಳನ್ನು ನೀಡುವಂಥ ಪ್ರಯೋಗಾತ್ಮಕ ಸಿನೆಮಾ. ಆದರೆ ಕಮರ್ಷಿಯಲ್ ಪ್ರೇಕ್ಷಕರ ವಿಚಾರಕ್ಕೆ ಬಂದರೆ ಅವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಿತ್ರದ ನಾಯಕ ಅನಂತನಾಗಿ ಸಂಚಾರಿ ವಿಜಯ್ ನಟನೆ ಎಂದಿನಂತೆ ಆಕರ್ಷಕವಾಗಿದೆ ‘ಅನಂತ’ನ ಮೂಲಕ ‘ಆದರ್ಶ’ನ ಹುಡುಕಾಟ ಮಾಡಿಸುವ ನಿರ್ದೇಶಕರ ಜಾಣ್ಮೆಯೂ ಮೆಚ್ಚತಕ್ಕದ್ದು. ಸಹೋದರಿಯಾಗಿ ವಾಣಿ ಶ್ರೀ, ವೈದ್ಯೆಯಾಗಿ ಸಪ್ನಾರಾಜ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಉಳಿದಂತೆ ಪಾತ್ರ, ಸಂಭಾಷಣೆಗಳಿಗಿಂತ ಸನ್ನಿವೇಶಗಳಿಗೆ ಒತ್ತು ನೀಡಲಾಗಿದೆ. ನಾಯಕಿ ಸಂಜನಾ ಪ್ರಕಾಶ್‌ಗೆ ವಿಶೇಷ ಅವಕಾಶಗಳೇನೂ ಇಲ್ಲ.

ವಿಶ್ವನಾಥ್‌ರ ಸಂಕಲನ ಚೆನ್ನಾಗಿದೆ. ಆದರೆ ನಿರ್ದೇಶಕರು ಬಯಸಿದ್ದಲ್ಲಿ ಚಿತ್ರವನ್ನು ಇನ್ನಷ್ಟು ಹೃಸ್ವಗೊಳಿಸಬಹುದಿತ್ತು! ಶರವಣ ಅವರ ಸಂಗೀತದಲ್ಲಿ ಹಾಡುಗಳಿಲ್ಲವಾದರೂ ಹಿನ್ನೆಲೆ ಸಂಗೀತದಿಂದಲೇ ಆಕರ್ಷಣೆ ತುಂಬಿದ್ದಾರೆ.

ಒಟ್ಟಿನಲ್ಲಿ ‘ವರ್ತಮಾನ’ ಸುಲಭದಲ್ಲಿ ಅರ್ಥವಾಗುವುದಿಲ್ಲ. ಅದಕ್ಕೆ ಕಾರಣ, ವರ್ತಮಾನ ಕಾಲದಲ್ಲಿ ಸುಲಭದಲ್ಲಿ ಯಾವುದೂ ಯಾರಿಗೂ ಅರ್ಥವಾಗುವುದಿಲ್ಲ. ಎಲ್ಲಕ್ಕೂ, ಎಲ್ಲರಿಗೂ ಎರಡು ಮುಖಗಳಿರುತ್ತವೆ. ಅವುಗಳನ್ನು ಅರಿಯಲು ಸಾಮರ್ಥ್ಯ ಇರುವವರು ಚಿತ್ರ ನೋಡಬಹುದು.

ತಾರಾಗಣ: ಸಂಚಾರಿ ವಿಜಯ್, ಸಂಜನಾ ಪ್ರಕಾಶ್
ನಿರ್ದೇಶಕ: ಉಮೇಶ್ ಅಂಶಿ
ನಿರ್ಮಾಪಕರು: ಮನು ಬಿಲ್ಲೇಮನೆ, ಹೇಮಾವತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News