ನೋಟಿಸ್ ಇಲ್ಲದೆ ಹಣಕಾಸು ಸಂಸ್ಥೆ ಸುಸ್ತಿದಾರನ ವಾಹನವನ್ನು ಜಪ್ತಿ ಮಾಡುವಂತಿಲ್ಲ

Update: 2018-04-08 15:51 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.8: ಹಣಕಾಸು ಸಂಸ್ಥೆಯು ಬಾಕಿಯನ್ನು ಪಾವತಿಸದ್ದಕ್ಕಾಗಿ ನೋಟಿಸ್ ನೀಡದ ಹೊರತು ಸುಸ್ತಿದಾರನಿಂದ ವಾಹನವನ್ನು ವಶಪಡಿಸಿಕೊಳ್ಳುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ರಾಷ್ಟ್ರೀಯ ಬಳಕೆದಾರರ ದೂರುಗಳ ಇತ್ಯರ್ಥ ಆಯೋಗ(ಎನ್‌ಸಿಡಿಆರ್‌ಸಿ)ವು ನೀಡಿದೆ.

ಸಾಲವನ್ನು ಮರುಪಾವತಿಸದ್ದಕ್ಕಾಗಿ ಶ್ರೀರಾಮ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿಯು ಸಾಲಗಾರ ಛತ್ತೀಸ್‌ಗಡದ ದುರ್ಗ ನಿವಾಸಿ ಸಖಾರಾಮ ಸಾಹು ಎಂಬಾತನ ಟ್ರಾಕ್ಟರ್‌ನ್ನು 2011,ಜನವರಿಯಲ್ಲಿ ವಶಪಡಿಸಿಕೊಂಡಿತ್ತು. ಕಂಪನಿಯ ಈ ಕ್ರಮ ಕಾನೂನು ಬಾಹಿರವಾಗಿದೆ ಮತ್ತು ಸಹಜ ನ್ಯಾಯವನ್ನು ಉಲ್ಲಂಘಿಸಿದೆ ಎಂದು ತೀರ್ಪು ನಿಡಿರುವ ಆಯೋಗವು, ಸಾಹುಗೆ ಆತ ಪಾವತಿಸಿದ್ದ 80,000ರೂ.ಗಳನ್ನು ಶೇ.9 ಬಡ್ಡಿಯೊಂದಿಗೆ ನಾಲ್ಕು ವಾರಗಳಲ್ಲಿ ಮರಳಿಸುವಂತೆ ಎ.6ರಂದು ಕಂಪನಿಗೆ ಆದೇಶಿಸಿದೆ. ಸಾಹುಗೆ ವಾಹನ ಮರುಸ್ವಾಧೀನ ನೋಟಿಸ್‌ನ್ನು ವಾಸ್ತವದಲ್ಲಿ ವಾಹನವನ್ನು ಜಪ್ತಿ ಮಾಡಿದ ಹತ್ತು ದಿನಗಳ ಬಳಿಕ ಜಾರಿಗೊಳಿಸಿರುವುದು ವಿಚಾರಣೆಯಿಂದ ದೃಢಪಟ್ಟಿದೆ ಎದು ಆಯೋಗವು ತನ್ನ ತೀರ್ಪಿನಲ್ಲಿ ಬೆಟ್ಟು ಮಾಡಿದೆ.

 ಸಾಹು 2009,ಡಿಸೆಂಬರ್‌ನಲ್ಲಿ ಟ್ರಾಕ್ಟರ್ ಖರೀದಿಗಾಗಿ ಒಂದು ಲಕ್ಷ.ರೂ.ಸಾಲವನ್ನು ಕಂಪನಿಯಿಂದ ಪಡೆದಿದ್ದ. ಆತ ಪ್ರತಿ ತಿಂಗಳಿಗೆ 4,677 ರೂ.ಗಳಂತೆ 31 ತಿಂಗಳುಗಳಲ್ಲಿ ಸಾಲವನ್ನು ಮರುಪಾವತಿಸಬೇಕಿತ್ತು. ಹಲವಾರು ಬಾರಿ ಬೇಡಿಕೆಯಿಟ್ಟಿದ್ದರೂ ಸಾಲಗಾರ ಹಣವನ್ನು ಕಟ್ಟಲಿಲ್ಲ ಎಂದು ಕಂಪನಿಯು 2011,ಜ.15ರಂದು ಟ್ರಾಕ್ಟರ್‌ನ್ನು ವಶಪಡಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಜಿಲ್ಲಾ ಗ್ರಾಹಕ ವೇದಿಕೆಯ ಮೆಟ್ಟಿಲನ್ನೇರಿದ್ದ ಸಾಹು, ಒಂದು ಲ.ರೂ.ಸಾಲದ ಬಾಬ್ತು ತಾನು 80,000ರೂ.ಗಳನ್ನು ಪಾವತಿಸಿದ್ದೇನೆ.ಆದರೆ ಇನ್ನೂ 1.30 ಲ.ರೂ.ಗಳನ್ನು ಪಾವತಿಸುವಂತೆ ಕಂಪನಿಯು ತನಗೆ ಸೂಚಿಸಿರುವುದು ಅನ್ಯಾಯವಾಗಿದೆ ಎಂದು ವಾದಿಸಿದ್ದ. ಆದರೆ ಜಿಲ್ಲಾ ನ್ಯಾಯಾಲಯ ಆತನಿಗೆ ವಿರುದ್ಧವಾದ ತೀರ್ಪನ್ನು ನೀಡಿತ್ತು. ರಾಜ್ಯ ಗ್ರಾಹಕ ನ್ಯಾಯಾಲಯವೂ ಅದನ್ನು ಎತ್ತಿ ಹಿಡಿದಿತ್ತು. ಛಲ ಬಿಡದ ಸಾಹು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಮೆಟ್ಟಲನ್ನೇರಿದ್ದು, ಅದು ಆತನ ಪರವಾಗಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News