ನ್ಯಾ. ರಂಜನ್ ಗೊಗೊಯಿ ಸಿಜೆಐ ಆಗದಿದ್ದರೆ ನಮ್ಮ ಆತಂಕ ನಿಜವಾಗುತ್ತದೆ: ನ್ಯಾ. ಚೆಲಮೇಶ್ವರ್

Update: 2018-04-08 15:54 GMT

ಹೊಸದಿಲ್ಲಿ, ಎ.8: ನ್ಯಾಯಾಧೀಶ ರಂಜನ್ ಗೊಗೊಯಿಯವರನ್ನು ಭಾರತದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆ ಮಾಡದೇ ಇದ್ದಲ್ಲಿ ನಾವು ಈ ಹಿಂದೆ ಪತ್ರಿಕಾಗೋಷ್ಟಿಯಲ್ಲಿ ವ್ಯಕ್ತಪಡಿಸಿರುವ ಆತಂಕವು ನಿಜವಾಗಲಿದೆ ಎಂದು ಹಿರಿಯ ನ್ಯಾಯಾಧೀಶ ಜೆ. ಚೆಲಮೇಶ್ವರ್ ತಿಳಿಸಿದ್ದಾರೆ.

ಭಾರತೀಯ ಹಾರ್ವರ್ಡ್ ಕ್ಲಬ್ ಆಯೋಜಿಸಿದ್ದ ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗದ ಪಾತ್ರ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಚೆಲಮೇಶ್ವರ್, ನಾವು ನಾಲ್ಕು ನ್ಯಾಯಾಧೀಶರು ನಡೆಸಿದ ಪತ್ರಿಕಾಗೋಷ್ಟಿಯು ನ್ಯಾಯಾಧೀಶ ಗೊಗೊಯಿಯವರನ್ನು ಸಿಜೆಐ ಆಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಅಡ್ಡ ಬರುವುದಾದರೆ ನಾವು ಆ ಪತ್ರಿಕಾಗೋಷ್ಟಿಯಲ್ಲಿ ವ್ಯಕ್ತಪಡಿಸಿದ್ದ ಆತಂಕವು ನಿಜವಾಗಲಿದೆ ಎಂದು ತಿಳಿಸಿದ್ದಾರೆ. ಹಾಗಾಗುವುದಿಲ್ಲ ಎಂದು ನಂಬುತ್ತೇನೆ. ಆದರೆ ಒಂದು ವೇಳೆ ಹಾಗಾದರೆ ನಾವು ಪತ್ರಿಕಾಗೋಷ್ಟಿಯಲ್ಲಿ ಹೇಳಿದ ಮಾತುಗಳು ನಿಜವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಜನವರಿ 12ರಂದು ನ್ಯಾಯಾಧೀಶರಾದ ಜೆ. ಚೆಲಮೇಶ್ವರ್, ರಂಜನ್ ಗೊಗೊಯಿ, ಮದನ್ ಬಿ. ಲೊಕೂರ್ ಮತ್ತು ಕುರಿಯನ್ ಜೋಸೆಫ್ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಕಾರ್ಯವೈಖರಿ ಬಗ್ಗೆ ಹಾಗೂ ಸಿಜೆಐ ದೀಪಕ್ ಮಿಶ್ರಾ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಚೆಲಮೇಶ್ವರ್ ಜೂನ್‌ನಲ್ಲಿ ನಿವೃತ್ತಿ ಹೊಂದಲಿದ್ದರೆ ದೇಶದ ಮುಂದಿನ ಮುಖ್ಯ ನ್ಯಾಯಾಧೀಶರಾಗುವ ಸಾಲಿನಲ್ಲಿ ನ್ಯಾಯಾಧೀಶ ರಂಜನ್ ಗೊಗೊಯಿ ಮೊದಲಿಗರಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವರು ಮುಖ್ಯ ನ್ಯಾಯಾಧೀಶರ ಸ್ಥಾನವನ್ನು ಸ್ವೀಕರಿಸುವ ಸಾಧ್ಯತೆಯಿದೆ.

ಪದಚ್ಯುತಿ ನ್ಯಾಯಾಂಗದ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ: ಚೆಲಮೇಶ್ವರ್

ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ಪದಚ್ಯುತಿ ನಿರ್ಣಯ ಮಂಡನೆಯ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಚೆಲಮೇಶ್ವರ್, ನ್ಯಾಯಾಂಗದಲ್ಲಿ ಪದಚ್ಯುತಿಯೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ. ನಮ್ಮ ದೇಶವು ಪದಚ್ಯುತಿ ಬಗ್ಗೆ ಇಷ್ಟೊಂದು ಕುತೂಹಲ ಯಾಕೆ ಹೊಂದಿದೆ ಎಂದು ತಿಳಿಯುತ್ತಿಲ್ಲ. ಎಲ್ಲರೂ ಈ ಪದವನ್ನು ಬಳಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಯಾರೋ ನನ್ನನ್ನು ಪದಚ್ಯುತಿಗೊಳಿಸಬೇಕೆಂದು ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ. ನಿವೃತ್ತಿಯ ಬಳಿಕ ತಾನು ಯಾವುದೇ ಸರಕಾರಿ ಉದ್ಯೋಗಕ್ಕೆ ಸೇರುವುದಿಲ್ಲ ಎಂದು ಹಿರಿಯ ನ್ಯಾಯಾಧೀಶ ಚೆಲಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News