ಜೊತೆಯಲ್ಲಿ ವಾಸಿಸುವಂತೆ ಪತಿಯು ಪತ್ನಿಯನ್ನು ಒತ್ತಾಯಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್

Update: 2018-04-08 16:25 GMT

ಹೊಸದಿಲ್ಲಿ, ಎ.8: ಪತ್ನಿ ಒಂದು ವಸ್ತುವಲ್ಲ. ಪತಿ ಎಷ್ಟೇ ಅರ್ಹನಾಗಿದ್ದರೂ ಪತ್ನಿಯನ್ನು ತನ್ನ ಜೊತೆ ವಾಸಿಸುವಂತೆ ಒತ್ತಡ ಹೇರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ತನ್ನ ಪತಿಯ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿರುವ ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ತಾನು ಪತಿಯ ಜೊತೆ ವಾಸಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

ಪತ್ನಿ ಒಂದು ಸರಕಲ್ಲ. ಆಕೆ ನಿನ್ನ ಜೊತೆ ವಾಸಿಸಲು ಬಯಸುತ್ತಿಲ್ಲ. ನೀನು ಹೇಗೆ ಆಕೆಯ ಜೊತೆ ವಾಸಿಸುತ್ತೇನೆ ಎಂದು ಹೇಳುತ್ತೀಯ? ಎಂದು ನ್ಯಾಯಾಧೀಶ ಮದನ್ ಬಿ.ಲೊಕೂರ್ ಮತ್ತು ದೀಪಕ್ ಗುಪ್ತಾ ಅವರ ನ್ಯಾಯಾಂಗ ಪೀಠವು ಆರೋಪಿ ಪತಿಯನ್ನು ಪ್ರಶ್ನಿಸಿದೆ. ನನ್ನ ಕಕ್ಷೀದಾರಳು ಪತಿಯಿಂದ ವಿಚ್ಛೇದನವನ್ನು ಬಯಸಿದ್ದಾರೆ. ನಾವು ಕೌಟುಂಬಿಕ ಹಿಂಸೆ ದೂರನ್ನು ಹಿಂಪಡೆಯಲು ಸಿದ್ಧರಿದ್ದೇವೆ. ನಮಗೆ ಪರಿಹಾರವೂ ಬೇಡ. ನನ್ನ ಕಕ್ಷೀದಾರಳಿಗೆ ತನ್ನ ಪತಿಯ ಜೊತೆ ವಾಸಿಸಲು ಇಷ್ಟವಿಲ್ಲ ಎಂದು ಮಹಿಳೆ ಪರ ವಕೀಲರು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಇಬ್ಬರೂ ಸುಶಿಕ್ಷಿತರಾಗಿರುವ ಕಾರಣ ಮೊದಲಿಗೆ ನ್ಯಾಯಾಲಯವು ಪತಿ-ಪತ್ನಿ ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಸ್ಪರ ಸಮಾಲೋಚನೆ ನಡೆಸಿ ತಮ್ಮಲ್ಲೇ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿತ್ತು. ಆದರೆ ಈ ಸಲಹೆಯೂ ಫಲ ನೀಡದ ಕಾರಣ ನ್ಯಾಯಾಲಯವು ಪತಿ-ಪತ್ನಿ ಪ್ರತ್ಯೇಕ ಜೀವಿಸಲು ಅವಕಾಶ ನೀಡಿ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News