ತಮಿಳು ಮೀನುಗಾರರನ್ನು ಓಡಿಸಿದ ಶ್ರೀಲಂಕಾ ನೌಕಾಪಡೆ
Update: 2018-04-08 22:05 IST
ರಾಮೇಶ್ವರಂ.ಎ.8: ಶನಿವಾರ ರಾತ್ರಿ ಕಛತೀವು ಬಳಿ ಭಾರತೀಯ ಜಲಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ 2,000ಕ್ಕೂ ಅಧಿಕ ತಮಿಳುನಾಡಿನ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬೆನ್ನಟ್ಟಿ ಓಡಿಸಿದ್ದು, ಸುಮಾರು 20 ದೋಣಿಗಳಲ್ಲಿದ್ದ ಬಲೆಗಳನ್ನು ಕಿತ್ತುಕೊಂಡಿದೆ.
ಕಛತೀವು ದ್ವೀಪದ ಮೀನುಗಾರರು 434 ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಅಲ್ಲಿಗೆ ಆಗಮಿಸಿದ್ದ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಈ ಕೃತ್ಯವೆಸಗಿದ್ದಾರೆ ಎಂದು ರಾಮೇಶ್ವರಂ ಮೀನುಗಾರರ ಸಂಘದ ಅಧ್ಯಕ್ಷ ಪಿ.ಶೇಷುರಾಜ ಅವರು ರವಿವಾರ ಇಲ್ಲಿ ಆರೋಪಿಸಿದರು. ಇದರಿಂದಾಗಿ ಎಲ್ಲ ಮೀನುಗಾರರು ಬರಿಗೈಯಲ್ಲಿ ಮರಳುವಂತಾಗಿದೆ ಎಂದರು.
ಮಾ.30ರಂದು ಸಹ 2,500ಕ್ಕೂ ಅಧಿಕ ಕಛತೀವು ಮೀನುಗಾರರು ದ್ವೀಪದ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಶ್ರೀಲಂಕಾ ನೌಕಾಪಡೆಯು ಅವರನ್ನು ಬೆನ್ನಟ್ಟಿ ಓಡಿಸಿತ್ತು.