ಕೇಂದ್ರ ಸರಕಾರ ದಲಿತ ವಿರೋಧಿ ಎನ್ನುವುದಕ್ಕೆ ಬಿಜೆಪಿ ಸಂಸದರ ಆರೋಪಗಳೇ ಸಾಕ್ಷಿ: ಕಾಂಗ್ರೆಸ್
ಹೊಸದಿಲ್ಲಿ, ಎ.8: ಕೇಂದ್ರ ಸರಕಾರದ ದಲಿತ ವಿರೋಧಿ ನೀತಿಯ ಬಗ್ಗೆ ಬಿಜೆಪಿಯ ಐವರು ಸಂಸದರು ಮಾಡಿರುವ ಟೀಕೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ದೇಶವನ್ನು ‘ದಲಿತ ಮುಕ್ತ’ಗೊಳಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶವಾಗಿದೆ ಎಂದು ಹೇಳಿದೆ. ಸರಕಾರದ ದಲಿತ ವಿರೋಧಿ ನೀತಿಯನ್ನು ಆಡಳಿತ ಪಕ್ಷದ ಸಂಸದರೇ ಟೀಕಿಸುತ್ತಿರುವುದು ಕೇಂದ್ರ ಸರಕಾರ ದಲಿತ ವಿರೋಧಿ ಎಂಬುದನ್ನು ದೃಢಪಡಿಸಿದೆ. ಈಗಲಾದರೂ ಮೋದಿ ಮೌನ ಮುರಿದು ಪಕ್ಷದ ದಲಿತ ಸಂಸದರ ಆತಂಕವನ್ನು ದೂರಗೊಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಜೈವೀರ್ ಶೇರ್‌ಗಿಲ್ ಹೇಳಿಕೆ ನೀಡಿದ್ದಾರೆ.
‘ಚಾಯ್ ಪೆ ಚರ್ಚ’ ಹಾಗೂ ‘ಮನ್ ಕಿ ಬಾತ್’ ಕಾರ್ಯಕ್ರಮಗಳ ಬದಲು ಮೊದಲು ನಿಮ್ಮ ಪಕ್ಷದ ಸಂಸದರ ಜೊತೆ ಚರ್ಚೆ ನಡೆಸಿ, ದಲಿತ ಸಂಸದರ ‘ಮನ್ ಕಿ ಬಾತ್’ ಆಲಿಸಿ ಎಂದು ಸಲಹೆ ನೀಡಿದ ಶೇರ್‌ಗಿಲ್, ಮೋದಿ ಸರಕಾರ ದಲಿತರಿಗಾಗಿ ಏನನ್ನೂ ಮಾಡಿಲ್ಲ ಎಂದು ಬಿಜೆಪಿ ಸಂಸದರೇ ದೂರುತ್ತಿರುವುದು ಸರಕಾರದ ದಲಿತ ವಿರೋಧಿ ನೀತಿ ಪರಾಕಾಷ್ಟೆಯನ್ನು ಮುಟ್ಟಿರುವ ದ್ಯೋತಕವಾಗಿದೆ ಎಂದರು. ಒಟ್ಟು ಜನಸಂಖ್ಯೆಯ ಶೇ.50ರಷ್ಟು ದಲಿತರು ಹಾಗೂ ಆದಿವಾಸಿ ಸಮುದಾಯದವರನ್ನು ಹೊಂದಿರುವ ಹಳ್ಳಿಯಲ್ಲಿ ಒಂದು ರಾತ್ರಿ ತಂಗುವ ಮೂಲಕ ಅವರ ಸಮಸ್ಯೆಯನ್ನು ಅರ್ಥೈಸಿಕೊಳ್ಳಬೇಕು ಎಂದು ಮೋದಿ ಬಿಜೆಪಿ ಸಂಸದರಿಗೆ ಕರೆ ನೀಡಿರುವುದನ್ನು ಉಲ್ಲೇಖಿಸಿದ ಶೇರ್‌ಗಿಲ್, ಮೋದಿ ಇಂತಹ ಅಗ್ಗದ ರಾಜಕೀಯ ಸ್ಟಂಟ್ ಮಾಡುವ ಬದಲು, ತನ್ನ ಪಕ್ಷದ ದಲಿತ ಸಂಸದರನ್ನು ಮನೆಗೆ ಕರೆಸಿಕೊಂಡು ಅವರ ಆತಂಕವನ್ನು ದೂರ ಮಾಡಬೇಕು ಎಂದು ಹೇಳಿದರು.