ಪರಸ್ಪರ ಒಪ್ಪಿಗೆಯ ವಿಚ್ಛೇದನ ಪ್ರಕರಣಗಳಲ್ಲಿ ವೈಯಕ್ತಿಕ ಉಪಸ್ಥಿತಿಯ ಅಗತ್ಯವಿಲ್ಲ

Update: 2018-04-08 16:38 GMT

ಮುಂಬೈ,ಎ.8: ವಿದೇಶಗಳಲ್ಲಿ ವಾಸವಿರುವ, ಪರಸ್ಪರರಿಂದ ದೂರವಾಗಿರುವ ದಂಪತಿ ಈಗ ಭಾರತದಲ್ಲಿ ವೈಯಕ್ತಿಕವಾಗಿ ಹಾಜರಾಗದೆ ಪರಸ್ಪರ ಸಮ್ಮತಿಯ ಮೇರೆಗೆ ಸುಲಭವಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳಬಹುದು. ಕಕ್ಷಿದಾರರ ವೈಯಕ್ತಿಕ ಉಪಸ್ಥಿತಿಗೆ ಒತ್ತಾಯಿಸದಂತೆ ಹಾಗೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹ ವಿಚ್ಛೇದನಕ್ಕೆ ಜಂಟಿ ಅರ್ಜಿಗಳನ್ನು ಪುರಸ್ಕರಿಸುವಂತೆ ಶುಕ್ರವಾರ ಕುಟುಂಬ ನ್ಯಾಯಾಲಯಗಳಿಗೆ ನಿರ್ದೇಶ ನೀಡುವ ಮೂಲಕ ಮುಂಬೈ ಉಚ್ಚ ನ್ಯಾಯಾಲಯವು ವೈವಾಹಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವವರು ಅದರಿಂದ ಪಾರಾಗಿ ಹೊಸ ಬದುಕನ್ನು ಆರಂಭಿಸಲು ಸುಗಮ ಮಾರ್ಗವನ್ನು ಕಲ್ಪಿಸಿದೆ. ಒಪ್ಪಿಗೆ ಪತ್ರಗಳಿಗೆ ದಂಪತಿಯ ಬದಲು ಅವರ ಅಧಿಕೃತ ಪವರ್ ಆಫ್ ಅಟಾರ್ನಿಯನ್ನು ಹೊಂದಿರುವ ವ್ಯಕ್ತಿಗಳು ಸಹಿ ಮಾಡಿದ್ದರೂ ಅದನ್ನು ಒಪ್ಪಿಕೊಳ್ಳುವಂತೆ ಅದು ಸೂಚಿಸಿದೆ.

ಪರಸ್ಪರ ದೂರವಾಗಿರುವ ದಂಪತಿ 1955ರ ಹಿಂದು ವಿವಾಹ ಕಾಯ್ದೆಯ ಕಲಂ 138ರಡಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದ ಪುಣೆಯ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರ 2018,ಜ.1ರ ಆದೇಶವನ್ನು ರದ್ದು ಗೊಳಿಸಿದ ನ್ಯಾ.ಭಾರತಿ ಡಾಂಗ್ರೆ ಅವರು ಈ ನಿರ್ದೇಶವನ್ನು ಹೊರಡಿಸಿದರು. ಒಪ್ಪಿಗೆ ಪತ್ರದಲ್ಲಿ ಪತ್ನಿಯ ಸಹಿ ಇಲ್ಲ, ಬದಲಿಗೆ ಆಕೆಯ ಪರವಾಗಿ ತಂದೆ ಸಹಿ ಮಾಡಿ ದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಕುಟುಂಬ ನ್ಯಾಯಾಲಯವು ಅರ್ಜಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿತ್ತು.

ಕುಟುಂಬ ನ್ಯಾಯಾಲಯಗಳಲ್ಲಿ ನಡೆಯುವ ಕಾನೂನು ಕಲಾಪಗಳಿಗೆ ದಿವಾಣಿ ಪ್ರಕ್ರಿಯಾ ಸಂಹಿತೆ(ಸಿಪಿಸಿ)ಯು ಅನ್ವಯವಾಗುತ್ತದೆ ಮತ್ತು ಸಿಪಿಸಿಯ ನಿಯಮಾವಳಿಗಳಂತೆ ಅರ್ಜಿಯನ್ನು ಅರ್ಜಿದಾರ ಅಥವಾ ಅವರಿಂದ ಪವರ್ ಆಫ್ ಅಟಾರ್ನಿಯನ್ನು ಪಡೆದಿರುವ ಅಧಿಕೃತ ವ್ಯಕ್ತಿಯು ದೃಢಪಡಿಸಬಹುದಾಗಿದೆ ಎಂದು ನ್ಯಾ.ಡಾಂಗ್ರೆ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಜಾಗತೀಕರಣದಿಂದಾಗಿ ಹಲವಾರು ವಿದ್ಯಾವಂತ ಜನರು ವಿದೇಶಗಳಿಗೆ ತೆರಳುತ್ತಿ ದ್ದಾರೆ ಮತ್ತು ನ್ಯಾಯಾಲಯಗಳಲ್ಲಿ ಹಾಜರಿರಲು ಅವರಲ್ಲಿ ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಉದಾತ್ತ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಲಭ್ಯವಿರುವ ಮಾರ್ಗಗಳನ್ನು ಬಳಸಿಕೊಂಡು ಇಂತಹ ಸಮಸ್ಯೆಗಳನ್ನು ಬಗೆಹರಿಸುವುದು ಅಕ್ರಮವಾಗುವುದಿಲ್ಲ ಎಂದು ನ್ಯಾ.ಡಾಂಗ್ರೆ ಅವರು ಉಚ್ಚ ನ್ಯಾಯಾಲಯದ ಇನ್ನೋರ್ವ ನ್ಯಾಯಾಧೀಶರ ತೀರ್ಪನ್ನು ಉಲ್ಲೇಖಿಸಿ ಹೇಳಿದರು.

 ಪ್ರಕರಣದಲ್ಲಿ ಅರ್ಜಿದಾರ ಮಹಿಳೆಯ ಪರಿತ್ಯಕ್ತ ಪತಿ ಪುಣೆಯಲ್ಲಿದ್ದರೂ ಕುಟುಂಬ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿ ಸಹಿ ಹಾಕಲು ಮತ್ತು ಪರಸ್ಪರ ಒಪ್ಪಿಗೆ ನಿಬಂಧನೆಗಳನ್ನು ದೃಢಪಡಿಸಲು ಆಕೆಗೆ ಸಾಧ್ಯವಾಗಿರಲಿಲ್ಲ. ಆಕೆ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದು, 2017ರ ಡಿಸೆಂಬರ್‌ನಲ್ಲಿ ವಿವಾಹ ವಿಚ್ಛೇದನವನ್ನು ಕೋರಿ ಜಂಟಿ ಅರ್ಜಿ ಸಲ್ಲಿಸಿದ್ದ ಸಂದರ್ಭ ಆಕೆಯ ಕಂಪನಿಯ ನಿಯಮಾವಳಿಗಳು ಭಾರತಕ್ಕೆ ಮರಳಲು ಅವಕಾಶ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News