ಬ್ಯಾಡ್ಮಿಂಟನ್: ಫೈನಲ್ ತಲುಪಿದ ಸೈನಾ-ಶ್ರೀಕಾಂತ್
Update: 2018-04-08 22:23 IST
ಗೋಲ್ಡ್‌ಕೋಸ್ಟ್, ಎ.8: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರವಿವಾರ ನಡೆದ ಮಿಕ್ಸ್ಡ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ವಿಶ್ವ ನಂ.2 ಆಟಗಾರ ಕಿಡಂಬಿ ಶ್ರೀಕಾಂತ್ ಸಿಂಗಾಪುರ ತಂಡವನ್ನು ಸೆಮಿಫೈನಲ್‌ನಲ್ಲಿ 3-1 ರಿಂದ ಮಣಿಸುವ ಮೂಲಕ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಐದನೇ ಪಂದ್ಯವಾಡುತ್ತಿರುವ ಸೈನಾ ಸಿಂಗಾಪುರದ ಜಿಯ ಮಿನ್ ಇಯೊ ವಿರುದ್ಧ 21-8, 21-15 ಅಂತರದಲ್ಲಿ ಜಯ ಸಾಧಿಸಿದರು.
ಕಿಡಂಬಿ ಶ್ರೀಕಾಂತ್ ಸಿಂಗಾಪುರದ ಕೀನ್ ಯೂ ಲೊ ವಿರುದ್ಧ 21-17, 21-14 ನೇರ ಸೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ಭಾರತ ತಂಡದ ಫೈನಲ್ ಪ್ರವೇಶವನ್ನು ಸುಗಮಗೊಳಿಸಿದರು. ಸಾತ್ವಿಕ್ ರಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಮಿಕ್ಸ್ಡ್ ಡಬಲ್ಸ್ ಸಿಂಗಾಪುರದ ಯೋಂಗ್ ಕೈ ಟೆರಿ ಹೀ ಮತ್ತು ಜಿಯ ಯಿಂಗ್ ಕ್ರಿಸ್ಟಲ್ ವಾಂಗ್‌ರನ್ನು 22-20 ಮತ್ತು 21-18 ಸೆಟ್‌ಗಳಿಂದ ಪರಭಾವಗೊಳಿಸುವ ಮೂಲಕ ದಿನವನ್ನು ಆರಂಭಿಸಿದರು.