×
Ad

ಪುರುಷರ ಹಾಕಿ: ವೇಲ್ಸ್ ತಂಡವನ್ನು 4-3 ಅಂತರದಲ್ಲಿ ಮಣಿಸಿದ ಭಾರತ

Update: 2018-04-08 22:27 IST

ಗೋಲ್ಡ್‌ಕೋಸ್ಟ್, ಎ.8: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರವಿವಾರದಂದು ಭಾರತದ ಪುರುಷರ ಹಾಕಿ ತಂಡವು ವೇಲ್ಸ್ ತಂಡವನ್ನು 4-3 ಅಂತರದಿಂದ ಮಣಿಸುವ ಮೂಲಕ ಜಯ ನಗೆ ಬೀರಿದೆ. ಎಸ್.ವಿ ಸುನಿಲ್ 59ನೇ ನಿಮಿಷದಲ್ಲಿ ಬಾರಿಸಿದ ಗೋಲ್‌ನ ಫಲವಾಗಿ ಭಾರತವು ಕೊನೆಯ ಗಳಿಗೆಯಲ್ಲಿ ಜಯ ತನ್ನದಾಗಿಸಿಕೊಳ್ಳಲು ಸಫಲವಾಯಿತು. ಪಾಕಿಸ್ತಾನದ ಜೊತೆಗಿನ ಪಂದ್ಯದಲ್ಲಿ ಕೊನೆಯ ಗಳಿಗೆಯಲ್ಲಿ ಗೋಲ್ ಬಿಟ್ಟುಕೊಟ್ಟ ಕಾರಣ ಡ್ರಾ ಸಾಧಿಸಲಷ್ಟೇ ಭಾರತ ಶಕ್ತವಾಗಿತ್ತು.

ದಿಲ್‌ಪ್ರೀತ್ ಸಿಂಗ್, ಮಂದೀಪ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಗೋಲುಗಳ ಪರಿಣಾಮವಾಗಿ ಭಾರತವು ಮುನ್ನಡೆ ಸಾಧಿಸಿತ್ತು. ಆದರೆ ವೇಲ್ಸ್‌ನ ಗ್ಯಾರೆತ್ ಫರ್ಲಾಂಗ್ ಹ್ಯಾಟ್ರಿಕ್ ಗೋಲ್ ಬಾರಿಸುವ ಮೂಲಕ ತಮ್ಮ ತಂಡ ಪಂದ್ಯಕ್ಕೆ ಮರಳುವಂತೆ ನೋಡಿಕೊಂಡರು. ಅಂತಿಮ ಕ್ಷಣ ಮತ್ತೆ ಡ್ರಾಗೆ ಸಮಾಧಾನಪಟ್ಟುಕೊಳ್ಳಬೇಕು ಎಂಬ ಸ್ಥಿತಿ ಎದುರಾದಾಗ ಸುನೀಲ್ ತಮ್ಮ ಅನುಭವವನ್ನು ಒರೆಗೆ ಹಚ್ಚಿ ಅತ್ಯಂತ ವೇಗವಾಗಿ ಸಾಗಿ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಮುರಿದು ಗೋಲ್ ಬಾರಿಸುವಲ್ಲಿ ಸಫಲರಾದರು. ಪಾಕಿಸ್ತಾನದ ಜೊತೆ 2-2ರಿಂದ ಡ್ರಾ ಸಾಧಿಸಿರುವ ಭಾರತಕ್ಕೆ ಸೆಮಿ ಫೈನಲ್‌ನ ತಮ್ಮ ಕನಸನ್ನು ಜೀವಂತವಾಗಿಡಲು ರವಿವಾರದ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿತ್ತು. ಮುಂದಿನ ಬಿ ವಿಭಾಗದ ಪಂದ್ಯದಲ್ಲಿ ಮಂಗಳವಾರದಂದು ಭಾರತ ಮಲೇಷ್ಯಾವನ್ನು ಎದುರಿಸಲಿದೆ. ಭಾರತವು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಬದಲಾಯಿಸುವಲ್ಲಿ ವಿಫಲವಾಗುತ್ತಿದ್ದು ಇದು ಕೋಚ್ ಸೋರ್ಡ್ ಮರೈನ್‌ಗೆ ತಲೆನೋವಿನ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News