ಆಸ್ತಿ ವಿವರ ಸಲ್ಲಿಸದ 515 ಅಧಿಕಾರಿಗಳ ವಿರುದ್ಧ ಕಾನೂನುಕ್ರಮ ?
ಹೊಸದಿಲ್ಲಿ, ಎ.8: ಡಿಜಿಪಿ, ಐಜಿಪಿ ಸೇರಿದಂತೆ 515 ಐಪಿಎಸ್ ಅಧಿಕಾರಿಗಳು 2016ರ ವರ್ಷಕ್ಕೆ ಸಂಬಂಧಿಸಿದಂತೆ ತಮ್ಮ ಆಸ್ತಿವಿವರಗಳನ್ನು ಸಲ್ಲಿಸದ ಕಾರಣ ಬಡ್ತಿ ನಿರಾಕರಣೆ ಮುಂತಾದ ಕಾನೂನುಕ್ರಮ ಎದುರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಖಿಲ ಭಾರತ ಸೇವಾ (ನಡತೆ) ನಿಯಮಾವಳಿ 1968ರ ಪ್ರಕಾರ ಎಲ್ಲಾ ಐಪಿಎಸ್ ಅಧಿಕಾರಿಗಳು ತಮ್ಮ ಸ್ಥಿರಾಸ್ತಿಗಳ ವಿವರನ್ನು ಸೂಚಿತ ಫಾರಂನಲ್ಲಿ ಪ್ರತೀ ವರ್ಷದ ಜನವರಿ 31ರಂದು ಸಲ್ಲಿಸಬೇಕಿದೆ. ಹೀಗೆ ಮಾಡದ ಅಧಿಕಾರಿಗಳ ವಿರುದ್ಧ ಬಡ್ತಿ ನಿರಾಕರಣೆ, ವಿಜಿಲೆನ್ಸ್ ಕ್ಲಿಯರೆನ್ಸ್ ನೀಡದಿರುವುದು ಮುಂತಾದ ಕ್ರಮಗಳನ್ನು ಗೃಹ ಇಲಾಖೆ ಕೈಗೊಳ್ಳಬಹುದಾಗಿದೆ. ಆಸ್ತಿ ವಿವರ ಸಲ್ಲಿಸದ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಕಳಿಸುವಂತೆ ಗೃಹ ಇಲಾಖೆಯು ಎಲ್ಲಾ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶದ ಆಡಳಿತಕ್ಕೆ ಸೂಚಿಸಿದೆ. ನಿಯಮದ ಪ್ರಕಾರ ಜವಾನ ಹಾಗೂ ಬಹುಕಾರ್ಯ ಸಿಬ್ಬಂದಿ(ಮಲ್ಟಿ ಟಾಸ್ಕಿಂಗ್ ಸ್ಟಾಫ್)ಗಳನ್ನು ಹೊರತುಪಡಿಸಿ ಕೇಂದ್ರ ಸರಕಾರದ ಎಲ್ಲಾ ಸಿಬ್ಬಂದಿಗಳೂ ತಮ್ಮ ಆಸ್ತಿ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ.
ಇದೇ ನಿಯಮವನ್ನು ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯಲ್ಲೂ ಪ್ರಕಟಿಸಲಾಗಿದೆ. ನಗದು, ಬ್ಯಾಂಕ್ ಠೇವಣಿ, ಬಾಂಡ್ಸ್‌ಗಳಲ್ಲಿ ಹೂಡಿಕೆ ಮಾಡಿರುವುದು, ಮ್ಯೂಚುವಲ್ ಫಂಡ್ಸ್ ಅಥವಾ ಶೇರುಪತ್ರಗಳಲ್ಲಿ ಹೂಡಿಕೆ, ವಿಮಾ ಪಾಲಿಸಿ, ಪ್ರಾವಿಡೆಂಟ್ ಫಂಡ್, ವೈಯಕ್ತಿಕ ಸಾಲಗಳು, ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ನೀಡಿರುವ ಮುಂಗಡ ಇತ್ಯಾದಿ ವಿವರಗಳನ್ನು, ತಮ್ಮ ಹಾಗೂ ತಮ್ಮ ಮಕ್ಕಳು, ಪತಿ/ಪತ್ನಿಯ ಬಳಿ ಇರುವ ವಾಹನ, ವಿಮಾನ, ಹಡಗು, ಚಿನ್ನ ಮತ್ತು ಬೆಳ್ಳಿಯ ಆಭರಣಗಳ ವಿವರವನ್ನು ಘೋಷಿಸಬೇಕಿದೆ.