×
Ad

ಸರಕಾರವು ಶಿಕ್ಷಣದಲ್ಲಿರುವ ಮಾಫಿಯದ ವಿರುದ್ಧ ಹೋರಾಟ ಮಾಡುತ್ತಿದೆ: ಅಧಿಕಾರಿ

Update: 2018-04-08 23:08 IST

ಹೊಸದಿಲ್ಲಿ, ಎ.8: ಸಿಬಿಎಸ್‌ಇ ಹತ್ತನೇ ಮತ್ತು ಹನ್ನೆರಡನೇ ತರಗತಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಹೆತ್ತವರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಸಿರುವ ಮಧ್ಯೆಯೇ, ಶಿಕ್ಷಣ ಇಲಾಖೆಯಲ್ಲಿ ಮಾಫಿಯ ಮತ್ತು ಭ್ರಷ್ಟಾಚಾರ ಕಲ್ಲಿದ್ದಲು ಗಣಿ ಕೈಗಾರಿಕೆಯಲ್ಲಿ ಇರುವುದಕ್ಕಿಂತಲೂ ಆಳವಾಗಿ ಬೇರೂರಿದೆ ಎಂದು ಹಿರಿಯ ಶಿಕ್ಷಣ ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ ಕಲ್ಲಿದ್ದಲು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಸದ್ಯ ಕೇಂದ್ರ ಶಿಕ್ಷಣ ಕಾರ್ಯದರ್ಶಿಯಾಗಿರುವ ಅನಿಲ್ ಸ್ವರೂಪ್ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುವ ವೇಳೆ, ಕಲ್ಲಿದ್ದಲಿನ ವಿಷಯದಲ್ಲಿ ಗಣಿಯು ಭೂಗತವಾಗಿರುತ್ತದೆ ಮತ್ತು ಮಾಫಿಯ ಅದರ ಮೇಲಿರುತ್ತದೆ. ಆದರೆ ಶಿಕ್ಷಣದಲ್ಲಿ ಮಾಫಿಯ ಭೂಗತವಾಗಿರುತ್ತದೆ. ಸರಕಾರ ಈಗ ಈ ಮಾಫಿಯದ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸಿಬಿಎಸ್‌ಇ ಮುಖ್ಯಸ್ಥೆ ಅನಿತಾ ಕರ್ವಲ್‌ರ ಪರ ಮಾತನಾಡಿದ ಸ್ವರೂಪ್, ಜನರು ವಾಸ್ತವ ಅರಿಯದೆ ಆಕೆಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪತ್ರಿಕೆ ಸೋರಿಕೆಯಲ್ಲಿ ಆಕೆಯ ಪಾತ್ರ ಇದ್ದಂತೆ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇಲಾಖೆಯ ಯಾರೂ ಭಾಗಿಯಾಗಿರುವ ಬಗ್ಗೆ ಸಾಕ್ಷಿಗಳು ಲಭಿಸಿಲ್ಲ. ಒಂದು ವೇಳೆ ಯಾರಾದರೂ ಶಾಮೀಲಾಗಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ವರೂಪ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಿಲ್ಲಿಯಲ್ಲಿ ಮೂವರನ್ನು ಬಂಧಿಸಿದ್ದಾರೆ. ಸಿಬಿಎಸ್‌ಇ ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಈ ಅಧಿಕಾರಿ ಪತ್ರಿಕೆ ಸೋರಿಕೆಯಾದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News