ಬುಲೆಟ್ ರೈಲು ಯೋಜನೆ: ಭೂ ಸ್ವಾಧೀನ ವಿರುದ್ಧ ಗುಜರಾತ್ ರೈತರಿಂದ ಪ್ರತಿಭಟನೆ

Update: 2018-04-09 14:23 GMT

ವಡೋದರಾ,ಎ.9: ಅಹ್ಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸೋಮವಾರ ಇಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯ ವಿರುದ್ಧ ರೈತರ ಗುಂಪೊಂದು ಪ್ರತಿಭಟನೆ ನಡೆಸಿತು. ಅತ್ಯಂತ ಅಲ್ಪಾವಧಿಯ ನೋಟಿಸ್ ನೀಡಿ ಸಭೆಯನ್ನು ಕರೆಯಲಾಗಿದೆ ಎಂದು ರೈತರು ಆರೋಪಿಸಿದರು.

ಬುಲೆಟ್ ರೈಲು ಯೋಜನೆಯನ್ನು ಪೂರ್ಣಗೊಳಿಸುವ ಹೊಣೆಯನ್ನು ಹೊತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೇಲ್ ಕಾರ್ಪೊರೇಷನ್ (ಎನ್‌ಎಚ್‌ಎಸ್‌ಆರ್‌ಸಿ) ರವಿವಾರವಷ್ಟೇ ಪತ್ರಿಕೆಗಳಲ್ಲಿ ನೋಟಿಸ್‌ನ್ನು ಪ್ರಕಟಿಸಿ ರೈತರಿಗೆ ಸಭೆಯ ಮಾಹಿತಿಯನ್ನು ನೀಡಿತ್ತು.

ಭೂಸ್ವಾಧೀನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಎರಡನೇ ಸುತ್ತಿನ ಪಾಲುದಾರರ ಸಭೆಯನ್ನು ಕರೆಯಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆದರೆ ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿರುವ ರೈತರು, ವಾಸ್ತವದಲ್ಲಿ ಮೊದಲ ಸುತ್ತಿನ ಸಭೆಯೇ ನಡೆದಿಲ್ಲ ಎಂದು ಹೇಳಿದ್ದಾರೆ.

ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದ್ದ ಇಲ್ಲಿಯ ಮಹಾತ್ಮಾ ಗಾಂಧಿ ಪುರಭವನಕ್ಕೆ ಆಗಮಿಸಿದ ಪ್ರತಿಭಟನಾನಿರತ ರೈತರು, ಮೊದಲ ಸುತ್ತಿನ ಸಭೆಯ ಮಾಹಿತಿಗಳನ್ನು ತಮ್ಮಿಂದಿಗೆ ಹಂಚಿಕೊಳ್ಳುವಂತೆ ಎನ್‌ಎಚ್‌ಎಸ್‌ಆರ್‌ಸಿ ಅಧಿಕಾರಿಗಳನ್ನು ಆಗ್ರಹಿಸಿದರು.

 ಎರಡನೇ ಸುತ್ತಿನದೆಂದು ಅಧಿಕಾರಿಗಳು ಹೇಳುತ್ತಿರುವ ಈ ಸಭೆಯ ಕಾರ್ಯಸೂಚಿ ಮತ್ತು ಉದ್ದೇಶ ಸ್ಪಷ್ಟವಾಗಿಲ್ಲ. ಅತ್ಯಂತ ಅಲ್ಪಾವಧಿಯ ನೋಟಿಸ್ ನೀಡಿ ಸಭೆಯನ್ನು ಕರೆಯಲಾಗಿದೆ ಮತ್ತು ಇದರಿಂದಾಗಿ ದೂರದೂರುಗಳ ಭಾರೀಸಂಖ್ಯೆಯ ರೈತರಿಗೆ ಬರಲು ಸಾಧ್ಯವಾಗಿಲ್ಲ. ಮೊದಲ ಸುತ್ತಿನ ಸಭೆ ಯಾವಾಗ ನಡೆದಿತ್ತು ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದು ರೈತರ ಪ್ರತಿನಿಧಿ ಕೃಷ್ಣಕಾಂತ್ ಸುದ್ದಿಗಾರರಿಗೆ ತಿಳಿಸಿದರು.

 ತೊಂದರೆಗೊಳಗಾಗಲಿರುವ ರೈತರಿಗೆ ಮಾಹಿತಿ ನೀಡುವುದಕ್ಕಿಂತ ಕೇವಲ ಔಪಚಾರಿಕ ವಿಧಿಯನ್ನು ಪೂರೈಸುವುದು ನೋಟಿಸ್‌ನ ಉದ್ದೇಶವಾಗಿದೆ ಎಂದು ಪ್ರತಿಭಟನಾನಿರತ ರೈತರು ವಡೋದರಾ ಮತ್ತು ಭರೂಚ್ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಅಹವಾಲಿನಲ್ಲಿ ಹೇಳಲಾಗಿದೆ.

ತಮಗೆ ಸಾಕಷ್ಟು ಮುಂಚಿತವಾಗಿ ನೋಟಿಸ್ ನೀಡಿಲ್ಲ ಎಂದು ರೈತರು ದೂರಿಕೊಂಡಿದ್ದರೂ ಸುಮಾರು 60-70 ರೈತರು ಸಭೆಗೆ ಹಾಜರಾಗಿದ್ದರು ಎಂದು ತಿಳಿಸಿದ ಎನ್‌ಎಚ್‌ಎಸ್‌ಆರ್‌ಸಿ ಪರ ಸಮಾಲೋಚನೆಕಾರ ದ್ವೈಪಾಯನ ದತ್ತ ಅವರು, ಕೆಲವು ಪ್ರತಿಪಕ್ಷ ಸದಸ್ಯರು ಸಭೆಗೆ ವ್ಯತ್ಯಯವನ್ನುಂಟು ಮಾಡಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು.

ಯೋಜನೆಗಾಗಿ ರಾಜ್ಯದ 5,000 ಕುಟುಂಬಗಳಿಗೆ ಸೇರಿದ 800 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಈ ಪೈಕಿ 163 ಹೆಕ್ಟೇರ್ ಭೂಮಿ ವಡೋದರಾದ 747 ಕುಟುಂಬಗಳಿಗೆ ಸೇರಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News