ಮೆಹಬೂಬ ಜನತೆಯ ಪರವಾಗಿ ಧ್ವನಿಯೆತ್ತಬೇಕು

Update: 2018-04-09 16:48 GMT

ಶ್ರೀನಗರ,ಎ.9: ಸರಿಯಾಗಿ ಒಂದು ವರ್ಷದ ಹಿಂದೆ ಕಾಶ್ಮೀರಿ ಯುವಕ ಫಾರೂಕ್ ದಾರ್ ಅವರನ್ನು ಸೇನೆಯು ‘ಮಾನವ ಗುರಾಣಿ’ಯನ್ನಾಗಿ ಬಳಸಿಕೊಂಡಿದ್ದನ್ನು ಸೋಮವಾರ ಇಲ್ಲಿ ನೆನಪಿಸಿಕೊಂಡ ಜೆಎನ್‌ಯುದ ಮಾಜಿ ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಅವರು, ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ರಾಜ್ಯದ ಜನರ ಪರವಾಗಿ ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.

ದಾರ್ ತನ್ನ ಮತವನ್ನು ಚಲಾಯಿಸಲು ತೆರಳುತ್ತಿದ್ದಾಗ ಈ ಅಮಾನವೀಯ ಕೃತ್ಯದ ಬಲಿಪಶುವಾಗಿದ್ದರು. ಅದಾಗಿ ಒಂದು ವರ್ಷದ ಬಳಿಕವೂ ಅವರು ಆಘಾತದಿಂದ ಹೊರಗೆ ಬಂದಿಲ್ಲ. ಮೆಹಬೂಬ ಶಾಸನಬದ್ಧವಾಗಿ ಆಯ್ಕೆಯಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ, ಆದರೆ ಅವರು ಜನರ ಪರವಾಗಿ ಧ್ವನಿಯೆತ್ತಬೇಕು ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶೆಹ್ಲಾ ನುಡಿದರು.

ಕಳೆದ ವರ್ಷದ ಎ.9ರಂದು ಬಡ್ಗಾಮ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರ ಕಲ್ಲುತೂರಾಟದಿಂದ ಪಾರಾಗಲು ಮೇಜರ್ ಲೀತುಲ್ ಗೊಗೊಯ್ ನೇತೃತ್ವದ ಸೇನಾತಂಡವು ಕಸೂತಿ ಕಲಾಕಾರ ದಾರ್ ಅವರನ್ನು ಸೇನೆಯ ಜೀಪಿನ ಬಾನೆಟ್‌ಗೆ ಕಟ್ಟಿ ಪರೇಡ್ ನಡೆಸಿತ್ತು. ಇದು ಜಾಗತಿಕವಾಗಿ ಭಾರೀ ಸುದ್ದಿ ಮಾಡಿತ್ತು ಮತ್ತು ಕಾಶ್ಮೀರ ಕಣಿವೆಯಲ್ಲಿ ನಾಗರಿಕ-ಸೇನೆ ಧ್ರುವೀಕರಣದ ಮೇಲೆ ಮತ್ತೊಮ್ಮೆ ಬೆಳಕು ಚೆಲ್ಲಿತ್ತು.

ಕಳೆದ ವಾರ ಶೋಪಿಯಾನ್‌ನಲ್ಲಿ ನಾಗರಿಕರ ಹತ್ಯೆಗಳ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಿದ ಶೆಹ್ಲಾ, ರಾಜ್ಯದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗ ಅವಕಾಶ ನೀಡುವಂತೆ ಅಧಿಕಾರಿ ಗಳನ್ನು ಕೋರಿಕೊಂಡರು.

 ಕಥುವಾ ಜಿಲ್ಲೆಯಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಕೋಮುಬಣ್ಣವನ್ನು ನೀಡಲು ಪ್ರಯತ್ನಿಸುತ್ತಿರುವವರ ವಿರುದ್ಧ ರಾಜ್ಯ ಸರಕಾರವು ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಹಿಂಸೆಯನ್ನು ಕೈಬಿಡುವಂತೆ ರಾಜ್ಯ ಸರಕಾರವು ಪ್ರತಿಯೊಬ್ಬರಿಗೂ ಬೋಧಿಸುತ್ತಲೇ ಇದೆ, ಆದರೆ ಅದು ಖುದ್ದು ಹಿಂಸೆಯನ್ನು ಕೈಬಿಡಬೇಕು. ಅದು ಶರಣಾಗತಿ ನೀತಿಯನ್ನೇಕೆ ರೂಪಿಸುತ್ತಿಲ್ಲ? ಬಂದೂಕೊಂದೇ ಮೊದಲ ಉತ್ತರವೇಕೆ ಆಗಬೇಕು ಎಂದು ಪ್ರಶ್ನಿಸಿದ ಶೆಹ್ಲಾ, ಶಸ್ತ್ರಗಳನ್ನು ಕೈಗತ್ತಿಕೊಂಡಿರುವ ಉಗ್ರರು ಮತ್ತು ಯಾವುದೇ ಹಿಂಸಾಚಾರದಿಂದ ದೂರವಿರುವವರನ್ನು ಸರಕಾರವು ಸ್ಪಷ್ಟವಾಗಿ ಗುರುತಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News