ಬಂದಿದೆ ಇ-ಆಧಾರ್‌ಗಾಗಿ ಭಾವಚಿತ್ರ ಸಹಿತ ಡಿಜಿಟಲ್ ಸಹಿ ಇರುವ ಕ್ಯೂಆರ್ ಕೋಡ್
ಹೊಸದಿಲ್ಲಿ,ಎ.9: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಇ-ಆಧಾರ್‌ಗಾಗಿ ಡಿಜಿಟಲ್ ಸಹಿ ಇರುವ ಹೊಸ ಕ್ಯೂಆರ್ ಕೋಡ್ ಅನ್ನು ಪರಿಚಯಿಸಿದ್ದು, ಇದು ವ್ಯಕ್ತಿಯ ವಿವರಗಳ ಜೊತೆಗೆ ಭಾವಚಿತ್ರವನ್ನೂ ಹೊಂದಿರುತ್ತದೆ. ಇದರಿಂದಾಗಿ ವ್ಯಕ್ತಿಯ ಆಫ್‌ಲೈನ್ ಗುರುತು ದೃಢೀಕರಣ ಸುಗಮವಾಗಲಿದೆ.
ಪ್ರಾಧಿಕಾರವು ಕೇವಲ ವ್ಯಕ್ತಿಯ ವಿವರಗಳಿದ್ದ ಕ್ಯೂಆರ್ ಕೋಡ್‌ನ ಬದಲಿಗೆ ಸುಭದ್ರ, ಡಿಜಿಟಲ್ ಸಹಿ ಇರುವ ಭಾವಚಿತ್ರ ಸಹಿತ ಹೊಸ ಕ್ಯೂಆರ್ ಕೋಡ್‌ನ್ನು ಜಾರಿಗೊಳಿಸಿದೆ ಎಂದು ಯುಐಡಿಎಐ ಮೂಲವು ತಿಳಿಸಿದೆ.
ಕ್ಯೂಆರ್ ಕೋಡ್ ಬಾರ್‌ಕೋಡ್ ಲೇಬಲ್‌ನ ಒಂದು ರೂಪವಾಗಿದ್ದು, ಯಂತ್ರದ ಸಹಾಯದಿಂದ ಓದಬಹುದಾದ ವಿವರಗಳನ್ನು ಒಳಗೊಂಡಿದ್ದರೆ, ಇ-ಆಧಾರ್ ಆಧಾರ್‌ನ ವಿದ್ಯುನ್ಮಾನ ರೂಪವಾಗಿದ್ದು, ಇದನ್ನು ಯುಐಡಿಎಐ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇ-ಆಧಾರ್‌ನಿಂದ ಬ್ಯಾಂಕುಗಳಂತಹ ವಿವಿಧ ಏಜೆನ್ಸಿಗಳು ಆಫ್‌ಲೈನ್‌ನಲ್ಲಿ ಆಧಾರ್ ಅನ್ನು ದೃಢೀಕರಿಸಿಕೊಳ್ಳ ಬಹುದಾಗಿದೆ.
ಆಧಾರ್ ಕಾರ್ಡ್‌ನ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಲು ಇದು ಸರಳ ಆಫ್‌ಲೈನ್ ವ್ಯವಸ್ಥೆಯಾಗಿದೆ ಎಂದು ಯುಐಡಿಎಐನ ಸಿಇಒ ಅಜಯ್ ಭೂಷಣ ಪಾಂಡೆ ತಿಳಿಸಿದರು.
ಇ-ಆಧಾರ್ ಕ್ಯೂಆರ್ ಕೋಡ್ ರೀಡರ್ ಸಾಫ್ಟವೇರ್ ಪ್ರಾಧಿಕಾರದ ಜಾಲತಾಣದಲ್ಲಿ 2018,ಮಾ.27ರಿಂದ ಲಭ್ಯವಿದೆ.