ಪಾನ್ ಕಾರ್ಡ್‌ನಲ್ಲಿ ಹೀಗೆ ಗುರುತಿಸಿಕೊಳ್ಳಲಿದ್ದಾರೆ ತೃತೀಯ ಲಿಂಗಿಯರು

Update: 2018-04-10 15:53 GMT

ಹೊಸದಿಲ್ಲಿ, ಎ.10: ಆದಾಯ ತೆರಿಗೆ ಕಾನೂನಿನಲ್ಲಿ ತಿದ್ದುಪಡಿಯನ್ನು ಮಾಡಿರುವ ಸರಕಾರ, ತೆರಿಗೆ ಆಧಾರಿತ ವ್ಯವಹಾರಗಳಿಗಾಗಿ ಖಾಯಂ ಖಾತೆ ಸಂಖ್ಯೆ (ಪಾನ್) ಪಡೆಯುವ ಸಂದರ್ಭದಲ್ಲಿ ಮಂಗಳಮುಖಿಯರನ್ನು ಸ್ವತಂತ್ರ ಲಿಂಗ ಎಂದು ಗುರುತಿಸಿಕೊಳ್ಳಲು ಅವಕಾಶ ನೀಡಿದೆ.

ತೆರಿಗೆ ಇಲಾಖೆಗೆ ನೀತಿ ನಿರ್ಣಯ ಮಾಡುವ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ನಿನ್ನೆ ಜಾರಿ ಮಾಡಿರುವ ಅಧಿಸೂಚನೆಯಲ್ಲಿ ಪಾನ್ ಕಾರ್ಡ್‌ಗೆ ಹಾಕುವ ಅರ್ಜಿಯಲ್ಲಿ ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಕಾಲಂ ಒಂದನ್ನು ರಚಿಸಿದೆ. ಈ ಅಧಿಸೂಚನೆಯನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎ ಮತ್ತು 295ರ ಅಡಿ ಹೊರಡಿಸಲಾಗಿದೆ.

ಇತ್ತೀಚಿನವರೆಗೆ ಪಾನ್ ಕಾರ್ಡ್‌ನಲ್ಲಿ ಕೇವಲ ಪುರುಷ ಮತ್ತು ಮಹಿಳೆ ಎಂಬ ಎರಡು ಕಾಲಂಗಳಲ್ಲಿ ಮಾತ್ರ ಲಿಂಗವನ್ನು ತಿಳಿಸಬಹುದಾಗಿತ್ತು. ಸಿಬಿಡಿಟಿಗೆ ಬಂದಿರುವ ಸಲಹೆ ಮತ್ತು ಸೂಚನೆಗಳ ಆಧಾರದಲ್ಲಿ ಈ ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾನ್ ಕಾರ್ಡ್ ಪಡೆಯುವಲ್ಲಿ ತೃತೀಯ ಲಿಂಗಿಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದರು. ಆಧಾರ್ ಕಾರ್ಡ್‌ನಲ್ಲಿ ಮೂರನೇ ಲಿಂಗ ಗುರುತಿಗೆ ಅವಕಾಶವಿದ್ದ ಕಾರಣ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News