ಐಆರ್‌ಸಿಟಿಸಿ ಹಗರಣ: ರಾಬ್ರಿದೇವಿ ವಿಚಾರಣೆ ನಡೆಸಿದ ಸಿಬಿಐ

Update: 2018-04-10 17:01 GMT

ಹೊಸದಿಲ್ಲಿ, ಎ.10: ಲಾಲೂ ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ನಡೆದಿರುವ ಐಆರ್‌ಸಿಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಮಂಗಳವಾರದಂದು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿಯ ವಿಚಾರಣೆ ನಡೆಸಿತು.

 ಲಾಲೂ ಪ್ರಸಾದ್ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಭಾರತೀಯ ರೈಲ್ವೇಯ ಅಂಗಸಂಸ್ಥೆಯಾಗಿರುವ ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಪ್ರಾಧಿಕಾರ (ಐಆರ್‌ಸಿಟಿಸಿ) ನಿಭಾಯಿಸುವ ರಾಂಚಿ ಮತ್ತು ಪುರಿಯ ಎರಡು ಹೋಟೆಲ್‌ಗಳನ್ನು ವಿನಯ್ ಮತ್ತು ವಿಜಯ್ ಕೊಚ್ಚರ್ ಮಾಲಕತ್ವದ ಸುಜಾತಾ ಹೋಟೆಲ್‌ಗೆ ನೀಡಿದ್ದರು ಎಂಬ ಆರೋಪವಿದೆ. ಇದಕ್ಕೆ ಬದಲಾಗಿ ಲಾಲೂ ಬೇನಾಮಿ ಸಂಸ್ಥೆಯ ಮೂಲಕ ಪಾಟ್ನಾದ ಪ್ರಮುಖ ಪ್ರದೇಶದಲ್ಲಿ ಮೂರು ಎಕರೆ ಜಮೀನು ಪಡೆದುಕೊಂಡಿದ್ದರು ಎಂಬ ಆರೋಪವಿದೆ.

ಲಾಲೂ ಪ್ರಸಾದ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೊಚ್ಚರ್ ಸಹೋದರರಿಗೆ ನೆರವಾಗುವ ಮೂಲಕ ಡಿಲೈಟ್ ಮಾರ್ಕೆಟಿಂಗ್ ಕಂಪೆನಿ ಎಂಬ ಬೇನಾಮಿ ಸಂಸ್ಥೆಯ ಮೂಲಕ ದುಬಾರಿ ಬೆಲೆಯ ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೋಟೆಲ್ ಗುತ್ತಿಗೆಯನ್ನು ಸುಜಾತಾ ಹೋಟೆಲ್‌ಗೆ ನೀಡಿದ ಬಳಿಕ 2010 ಮತ್ತು 2014ರ ಮಧ್ಯೆ ಡಿಲೈಟ್ ಮಾರ್ಕೆಟಿಂಗ್ ಕಂಪೆನಿಯ ಮಾಲಕತ್ವವನ್ನೂ ಸರಳಾ ಗುಪ್ತಾ ಅವರಿಂದ ರಾಬ್ರಿದೇವಿ ಮತ್ತು ತೇಜಸ್ವಿ ಯಾದವ್ ಹೆಸರಿಗೆ ಬದಲಾಯಿಸಲಾಗಿತ್ತು. ಈ ವೇಳೆ ಲಾಲೂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಹಗರಣದಲ್ಲಿ ಸಿಬಿಐ ಲಾಲೂ ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿದೇವಿ, ಪುತ್ರ ತೇಜಸ್ವಿ ಯಾದವ್ ಮತ್ತು ಮಾಜಿ ಕೇಂದ್ರ ಸಚಿವ ಪ್ರೇಮ್ ಚಂದ್ ಗುಪ್ತಾ ಅವರ ಪತ್ನಿ ಸರಳಾ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News