ಪಾರ್ಕಿನ್‌ಸನ್ಸ್ ಎಂಬ ನಡುಕದ ಕಾಯಿಲೆ

Update: 2018-04-10 18:45 GMT

ಪಾರ್ಕಿನ್‌ಸನ್ಸ್ ಎಂಬುದು ಒಂದು ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ ಸಂಕೀರ್ಣ ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಕಂಡು ಬರುತ್ತದೆ. ಪಾರ್ಕಿನ್‌ಸನ್ಸ್ ಕಾಯಿಲೆ ಇರುವ ರೋಗಿಗಳಲ್ಲಿ ದೇಹದ ಚಲನವಲನಗಳಲ್ಲಿ ವ್ಯತ್ಯಾಸವಾಗುವ ದೇಹ ಸ್ಥಿತಿ ಕಂಡುಬರುತ್ತದೆ. ಮೆದುಳಿನ ಅಸಹಜತೆಯ ಈ ಕಾಯಿಲೆಯಲ್ಲಿ ನಡುಕ, ಕಂಪಿಸುವುದು, ನಡೆದಾಡಲು ಕಷ್ಟವಾಗುವುದು, ಚಲನವಲನ ಮತ್ತು ಸಂವಹನದ ತೊಂದರೆ ಉಂಟಾಗಬಹುದು. ನಡುಕದ ರೋಗದ ಬಗೆಗಿನ ಪ್ರಬಂಧ ಎಂದು ವಿವರಣೆ ನೀಡಿದ್ದ ವೈದ್ಯ ಜೇಮ್ಸ್ ಪಾರ್ಕಿನ್‌ಸನ್ಸ್ ಅವರ ನೆನಪಿಗಾಗಿ ಈ ಹೆಸರು ನೀಡಲಾಗಿದೆ. ಅವರ ಜನ್ಮ ದಿನವಾದ ಎಪ್ರಿಲ್ 11ನ್ನು ವಿಶ್ವ ಪಾರ್ಕಿನ್‌ಸನ್ಸ್ ದಿನ ಎಂದೂ ಆಚರಿಸಿ ರೋಗದ ಬಗ್ಗೆ ಜಾಗೃತಿಯನ್ನು ವಿಶ್ವದಾದ್ಯಂತ ಮಾಡಿಸಲಾಗುತ್ತದೆ.

ಪುರುಷರಲ್ಲಿ ಹೆಚ್ಚಾಗಿ ಕಂಡು ಬರುವ ಪಾರ್ಕಿನ್‌ಸನ್ಸ್, ಸಾಮಾನ್ಯವಾಗಿ 60 ವರ್ಷಗಳ ನಂತರ ಕಂಡು ಬರುತ್ತದೆ. ಹಿರಿಯ ನಾಗರಿಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ದೌರ್ಬಲ್ಯ ಅಥವಾ ಅಸಹಜತೆಯ ರೋಗಗಳಲ್ಲಿ ಪಾರ್ಕಿನ್‌ಸನ್ಸ್ ಕೂಡ ಒಂದಾಗಿದೆ. ಅತೀ ವಿರಳ ಸಂದರ್ಭಗಳಲ್ಲಿ ಯುವಕರಲ್ಲಿ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ಆನುವಂಶಿಕವಾಗಿಯೂ ಕುಟುಂಬಸ್ಥರಲ್ಲಿ ಕಾಡಲೂಬಹುದು. ಒಂದು ಕುಟುಂಬದಲ್ಲಿ ನರಗಳ ಕಾಯಿಲೆಯ ಹಿನ್ನೆಲೆ ಇದ್ದಲ್ಲಿ, ಆ ಕುಟುಂಬದ ಯುವಕ ಯುವತಿಯರಲ್ಲಿ ಈ ನರಗಳ ದೌರ್ಬಲ್ಯ ಪಾರ್ಕಿನ್‌ಸನ್ಸ್ ರೋಗದ ರೂಪದಲ್ಲಿ ಕಾಣಿಸಬಹುದು.

ಏನಿದು ಪಾರ್ಕಿನ್‌ಸನ್ಸ್ ಕಾಯಿಲೆ?
ನಮ್ಮ ದೇಹದ ಚಲನವಲನಗಳನ್ನು, ಸ್ನಾಯುಗಳು ಮತ್ತು ನರಗಳು ನಿಯಂತ್ರಿಸುತ್ತವೆ. ಶರೀರದಲ್ಲಿನ ಸ್ನಾಯುಗಳ ಚಲನೆಗೆ ಸಹಾಯಕವಾಗಲು ನರಕೋಶಗಳು ಮೆದುಳಿನಲ್ಲಿ ಡೋಪಾಮೈನ್ ಎಂಬ ರಾಸಾಯನಿಕವನ್ನು ಉಪಯೋಗಿಸುತ್ತವೆ. ಆದರೆ ಕಾರಣಾಂತರಗಳಿಂದ ಮೆದುಳಿನ ನರಕೋಶಗಳು ಡೋಪಾಮೈನನ್ನು ನಾಶ ಪಡಿಸಲು ಆರಂಭಿಸಿದಾಗ, ಈ ಪಾರ್ಕಿನ್‌ಸನ್ಸ್ ರೋಗ ಆರಂಭವಾಗುತ್ತದೆ. ಈ ಡೋಪಾಮೈನ್ ನಾಶಕ್ಕೆ ಹಲವಾರು ಕಾರಣಗಳು ಇರಬಹುದು. ಅನುವಂಶಿಕ ಕಾರಣವೂ ಇರಬಹುದು. ಇಲ್ಲವಾದಲ್ಲಿ ದೇಹದ ಪ್ರೊಟೀನ್‌ಗಳ ವಿರುದ್ಧವೇ ತೊಡ ತಟ್ಟಿ ಸಮರ ಸಾರಿದಲ್ಲಿ ದೇಹದ ಜೀವಕೋಶಗಳ ವಿರುದ್ಧವೇ ಪ್ರತಿರೋಧಗಳು ಉತ್ಪನ್ನವಾಗಿ ನರಕೋಶಗಳನ್ನು ಮತ್ತು ಜೀವಕೋಶಗಳನ್ನು ಕಾಡುತ್ತವೆ.

ಮೆದುಳಿನ ಭಾಗವಾಗಿರುವ ನರಕೋಶಗಳು ಡೋಪಾಮೈನ್ ಇಲ್ಲದೆ, ಸರಿಯಾಗಿ ಸಂದೇಶಗಳನ್ನು ರವಾನಿಸಲಾರವು. ಇದರಿಂದ ಸ್ನಾಯುಗಳ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಈ ವೈಫಲ್ಯಕ್ಕೆ ಯಾವುದೇ ಚಿಕಿತ್ಸೆ ಮಾಡಿಸದಿದ್ದಲ್ಲಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಯಾವ ಕಾರಣಕ್ಕಾಗಿ ಈ ರೀತಿ ಮೆದುಳಿನ ಕೋಶಗಳು ನಶಿಸುತ್ತವೆ ಎನ್ನುವುದರ ಬಗ್ಗೆ ಬಹಳ ಸಂಶೋಧನೆಗಳು ನಡೆಯುತ್ತಲೇ ಇವೆೆ. ಇನ್ನ್ನೂ ಸೂಕ್ತವಾದ ಸಮಂಜಸವಾದ ಕಾರಣ ಸಿಗದಿರುವುದೇ ಸೋಜಿಗದ ಅಂಶವಾಗಿದೆ. ಜೀವಕೋಶಗಳ ನಾಶಕ್ಕೆ ಕಾರಣವಾದ ನಿಗೂಢ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಚಿಕಿತ್ಸೆಗೆ ಅನುಕೂಲವಾಗಬಹುದು. ಚಿಕ್ಕ ವಯಸ್ಸಿನಲ್ಲಿ ನರಕೋಶಗಳು ಡೋಪಾಮೈನ್‌ಗೆ ಹೆಚ್ಚು ಸಂವೇದನಶೀಲವಾಗಿಲ್ಲದ ಕಾರಣ ಪಾರ್ಕಿನ್‌ಸನ್ಸ್ ಕಾಯಿಲೆ ಮಕ್ಕಳಲ್ಲಿ ಕಂಡು ಬರುವುದು ವಿರಳ.

ಲಕ್ಷಣಗಳು
ಆರಂಭದ ಹಂತದಲ್ಲಿ ಪಾರ್ಕಿನ್‌ಸನ್ಸ್ ಕಾಯಿಲೆಯ ಲಕ್ಷಣಗಳು ಬಹಳ ಸೌಮ್ಯವಾಗಿರುತ್ತದೆ. ಆರಂಭದಲ್ಲಿ ಒಂದೇ ಕಾಲಿನಲ್ಲಿ ಅಥವಾ ಕೈಯಲ್ಲಿ ನಡುಕ ಅಥವಾ ಕಾಲು ಸೆಟೆತ ಹಾಗೂ ಕಾಲು ಎಳೆತ ಕಾಣಿಸಿಕೊಳ್ಳಬಹುದು. ದೇಹದ ಒಂದು ಅಥವಾ ಎರಡು ಭಾಗಗಳಲ್ಲಿ ಪಾರ್ಕಿನ್‌ಸನ್ಸ್ ಲಕ್ಷಣಗಳು ಕಾಣಿಸಲೂಬಹುದು. ದೇಹದ ಸಮತೋಲನ ಮತ್ತು ನಡಿಗೆ ಕಷ್ಟವಾಗಬಹುದು. ಚಲನೆಗೆ ತೊಂದರೆಗಳು, ಚಲನೆ ಆರಂಭಿಸಲು ಕಷ್ಟವಾಗುವುದು, ಕುರ್ಚಿಯಿಂದ ಎದ್ದೇಳಲು ಕಷ್ಟವಾಗುವುದು, ನಡಿಗೆಯನ್ನು ಮುಂದುವರಿಸಲು ತಡಕಾಡುವುದು, ಚಲನೆ ನಿಧಾನವಾಗುವುದು ಇತ್ಯಾದಿ. ಸ್ನಾಯುಗಳಲ್ಲಿ ನೋವು ಮತ್ತು ಸೆಟೆಯುವುದು ಅಥವಾ ಪೆಡಸಾಗುವುದು. ಈ ಲಕ್ಷಣಗಳು ಹೆಚ್ಚಾಗಿ ಕಾಲುಗಳಲ್ಲಿ ಕಾಣಿಸುತ್ತದೆ. ಆಹಾರ ನುಂಗಲು ಕಷ್ಟವಾಗುವುದು, ಜೊಲ್ಲು ಸುರಿಸುವುದು ಮತ್ತು ಸೋರುವುದು, ಮುಖವು ಮುಖವಾಡ ಧರಿಸಿದಂತೆ ನಿರ್ಭಾವುಕವಾಗುವುದು. ರೆಪ್ಪೆಮಿಟುಕಿಸುವುದು, ಮಲಬದ್ಧತೆ, ಕೈಕಾಲುಗಳಲ್ಲಿ ಕಂಪನ, ಚಲನೆ ನಿಧಾನವಾಗುವುದು, ಕೈಯ ಸೂಕ್ಷ್ಮ ಚಲನೆ ಕಡಿಮೆಯಾಗುವುದು, ಬರವಣಿಗೆ ಕಷ್ಟವಾಗುವುದು ಹಾಗೂ ಓದಲು ಕಷ್ಟವಾಗುವುದು, ಆಹಾರ ಸೇವನೆಯಲ್ಲಿ ತೊಂದರೆ, ಕೈ ಕಾಲುಗಳು ಸ್ಥಿರವಾಗಿರುವಾಗ ಅಥವಾ ಚಲನೆಯಲ್ಲಿರುವಾಗ ಕಂಪಿಸುವುದು. ಚಲಿಸುವಾಗ ಕೈಕಾಲು ಒಟ್ಟೊಟ್ಟಾಗಿ ಚಲಿಸುವುದು. ಆಯಾಸಗೊಂಡರೆ, ಉದ್ವೇಗದಲ್ಲಿದ್ದರೆ ಅಥವಾ ಒತ್ತಡದ ಸನ್ನಿವೇಶಗಳಲ್ಲಿ ನಡುಕದ ತೀವ್ರತೆ ಹೆಚ್ಚಾಗುತ್ತದೆ. ಕೊನೆಗೆ ತಲೆ, ತುಟಿ, ನಾಲಗೆ ಹಾಗೂ ಕಾಲುಗಳಲ್ಲಿಯೂ ನಡುಕ ಕಂಡು ಬರುತ್ತದೆ. ಧ್ವನಿ ಇಳಿಯುವುದು, ಏರಿಳಿತ ಕಡಮೆಯಾಗುವುದು, ದೇಹ ಬಾಗುವುದು, ಹಾಸಿಗೆಯಿಂದ ಎದ್ದಾಗ ಬೆವರುವುದು, ದೇಹದ ಉಷ್ಣತೆ ಕಡಮೆಯಾಗುವುದು, ರಕ್ತದೊತ್ತಡ ಕಡಿಮೆಯಾಗುವುದು ಇದರ ಜೊತೆಗೆ ಆತಂಕ, ಒತ್ತಡ, ಉದ್ವೇಗದಿಂದ ಗೊಂದಲ ಉಂಟಾಗುತ್ತದೆ. ಮರೆವು, ಖಿನ್ನತೆ, ತಲೆ ಸುತ್ತುವುದು, ನೆನಪಿನ ಶಕ್ತಿ ಕುಂದುವುದು ಹಾಗೂ ಬುದ್ಧಿ ಮಾಂದ್ಯತೆಯೂ ಬರಬಹುದು. ಮುಂದುವರಿದ ಹಂತದಲ್ಲಿ ವಿಪರೀತವಾದ ಮರೆಗುಳಿತನ ಮತ್ತು ಮಾನಸಿಕ ಖಿನ್ನತೆ.

ಕಂಡು ಹಿಡಿಯುವುದು ಹೇಗೆ?
ದೈಹಿಕ ಪರೀಕ್ಷೆಗಳು ಮತ್ತು ದೇಹದ ರೋಗದ ಲಕ್ಷಣಗಳನ್ನು ಆಧರಿಸಿ ನುರಿತ ವೈದ್ಯರು ಪಾರ್ಕಿನ್‌ಸನ್ಸ್ ರೋಗವನ್ನು ಕಂಡು ಹಿಡಿಯುತ್ತಾರೆ. ವಿಶೇಷವಾಗಿ ವಯಸ್ಕರಲ್ಲಿ ಈ ಕಾಯಿಲೆಯ ಲಕ್ಷಣಗಳನ್ನು ಗುರುತಿಸುವುದು ಸ್ವಲ್ಪಕಷ್ಟವಾಗಬಹುದು. ಆದರೆ ಕಾಯಿಲೆ ತೀವ್ರವಾದರೆ ರೋಗದ ಲಕ್ಷಣಗಳು ಸ್ಪಷ್ಟವಾಗಿ ತಿಳಿದುಬರುತ್ತದೆ.

ಚಿಕಿತ್ಸೆ

ಪಾರ್ಕಿನ್‌ಸನ್ಸ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ. ರೋಗದ ಲಕ್ಷಣಗಳನ್ನು ನಿಯಂತ್ರಿಸುವುದೇ ಚಿಕಿತ್ಸೆಯ ಪ್ರಾಥಮಿಕ ಉದ್ದೇಶವಾಗಿರುತ್ತದೆ. ಔಷಧಿಗಳು ಮೆದುಳಿನ ಡೋಪಮೈನ್ ಮಟ್ಟವನ್ನು ಹೆಚ್ಚಿಸಿ, ರೋಗದ ಲಕ್ಷಣಗಳನ್ನು ನಿಯಂತ್ರಿಸುತ್ತವೆ. ದಿನದ ಕೆಲವು ಸಮಯದಲ್ಲಿ ಔಷಧಿಯ ಪ್ರಭಾವವು ತಗಲದ ಕಾರಣ, ಲಕ್ಷಣಗಳು ಮರುಕಳಿಸುವ ಸಾಧ್ಯತೆ ಇದೆ. ನುರಿತ ವೈದ್ಯರು, ಔಷಧಿಯ ಪ್ರಮಾಣ, ಅಂತರ ಮತ್ತು ಔಷಧಿಯ ವಿಧಾನವನ್ನು ಮತ್ತು ತೆಗೆದುಕೊಳ್ಳುವ ರೀತಿ ಯನ್ನು ಮಾರ್ಪಾಡು ಮಾಡಿ ರೋಗವನ್ನು ಹತೋಟಿಗೆ ತರುತ್ತಾರೆ. ವೈದ್ಯರ ಅನುಮತಿ ಇಲ್ಲದೆ ಔಷಧಿಯನ್ನು ಬದಲಿಸಬಾರದು ಮತ್ತು ಹೆಚ್ಚು ಔಷಧಿ ತೆಗೆದುಕೊಳ್ಳಲೇ ಬಾರದು. ಚಿಕಿತ್ಸೆ ಯಶಸ್ವಿಯಾಗಲು ರೋಗಿಗಳ ಸಹಕಾರವೇ ಅವಶ್ಯಕ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಕೆಲವೊಮ್ಮೆ ಔಷಧಿಗಳಿಂದ ವಾಂತಿ, ವಾಕರಿಕೆ, ಅತಿಸಾರ, ಭೇದಿ, ಉನ್ಮಾದ, ಭ್ರಮೆ, ಮುಂತಾದ ಅಡ್ಡ ಪರಿಣಾಮ ಬರುವ ಸಾಧ್ಯತೆ ಇದೆ.

ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ತೆಗೆದುಕೊಳ್ಳಿ. ಸ್ವಯಂ ವೈದ್ಯ ಪ್ರಾಣಾಪಾಯ ತಂದೊಡ್ಡಬಹುದು. ಈ ರೋಗದ ಚಿಕಿತ್ಸೆಯಲ್ಲಿ ರೋಗಿಯ, ವೈದ್ಯರ ಮತ್ತು ರೋಗಿಯ ಕುಟುಂಬಸ್ಥರ ಸಂಪೂರ್ಣ ಸಹಕಾರ ಮತ್ತು ಹೊಂದಾಣಿಕೆ ಅತೀ ಅಗತ್ಯವಾಗಿರುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಕಾಯಿಲೆ ತೀವ್ರವಾಗಿ ವ್ಯಕ್ತಿ ಸಂರ್ಪೂಣವಾಗಿ ಅಂಗ ವಿಕಲನಾಗುತ್ತಾನೆ. ಒಂದು ಹಂತದಲ್ಲಿ ಮೆದುಳಿನ ಎಲ್ಲ ಕಾರ್ಯ ಚಟುವಟಿಕೆಗಳು ನಿಂತು ಹೋಗಿ ವ್ಯಕ್ತಿ ಬೇಗನೆ ಮರಣ ಹೊಂದಬಹುದು. ಹೆಚ್ಚಿನ ಜನರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಾರೆ ಎನ್ನುವುದೇ ಸಮಾಧಾನಕರ ಅಂಶ.

ನಿರ್ವಹಣೆ ಹೇಗೆ?
ಜೀವನಶೈಲಿಯನ್ನು ಬದಲು ಮಾಡಿಕೊಳ್ಳಲೇಬೇಕು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು, ಸಾಕಷ್ಟು ವಿಶ್ರಾಂತಿ ಪಡೆಯಬೇಕು. ದೇಹದ ಸದ್ಯದ ಪರಿಸ್ಥಿತಿ ಮತ್ತು ಚಲನೆಗೆ ಪೂರಕವಾದ ಒಗ್ಗುವ ರೀತಿಯ ವ್ಯಾಯಾಮಗಳನ್ನೇ ಮಾಡಬೇಕು. ದೇಹವನ್ನು ವಿಪರೀತವಾಗಿ ದಂಡಿಸಿಕೊಳ್ಳಬಾರದು. ಉತ್ತಮವಾದ ಸಮತೋಲಿತವಾದ ವಿಟಮಿನ್ ಮತ್ತು ಪ್ರೊಟೀನ್ ಪೋಷಕಾಂಶಗಳಿರುವ ಆಹಾರವನ್ನು ಹೆಚ್ಚು ಸೇವಿಸಬೇಕು ಆಹಾರ ನುಂಗಲು ಕಷ್ಟವಾದಲ್ಲಿ ಆಹಾರ ತಜ್ಞರ ಬಳಿ ಸಲಹೆ ಕೇಳಿ ದೇಹಕ್ಕೆ ಒಗ್ಗುವ ಆಹಾರವನ್ನೇ ತಿನ್ನತಕ್ಕದ್ದು. ರೋಗಿಯ ದೇಹ ಸ್ಥಿತಿಗೆ ಪೂರಕವಾದ ರೀತಿಯಲ್ಲಿ ಆಹಾರ, ಪಾನೀಯಗಳಲ್ಲಿ ಬದಲಾವಣೆ ಮಾಡಬೇಕಾಗಿದೆ.

Writer - ಡಾ. ಮುರಲೀ ಮೋಹನ್, ಚೂಂತಾರು

contributor

Editor - ಡಾ. ಮುರಲೀ ಮೋಹನ್, ಚೂಂತಾರು

contributor

Similar News