ಭದ್ರತೆ ಹಿಂದೆಗೆತ ಲಾಲೂ ಹತ್ಯೆಗೆ ನಡೆಸಿರುವ ಪಿತೂರಿ : ರಾಬ್ರಿ ದೇವಿ

Update: 2018-04-11 12:37 GMT

ಪಾಟ್ನ, ಎ.11: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಕುಟುಂಬದವರು ವಾಸಿಸುತ್ತಿರುವ ಮನೆಗೆ ನಿಯೋಜಿಸಲಾಗಿರುವ ಭದ್ರತೆಯನ್ನು ರಾಜ್ಯ ಸರಕಾರ ಹಿಂಪಡೆದಿರುವುದು ಲಾಲೂಪ್ರಸಾದ್ ಹತ್ಯೆಗೆ ನಡೆಸಿರುವ ಪಿತೂರಿಯಾಗಿದೆ ಎಂದು ಲಾಲೂಪ್ರಸಾದ್ ಪತ್ನಿ. ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಆರೋಪಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಸಿಬಿಐ ಲಾಲೂಪ್ರಸಾದ್ ಮನೆಗೆ ಮಂಗಳವಾರ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ರಾಜ್ಯ ಸರಕಾರ ಮನೆಯ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ 32 ಯೋಧರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಬ್ರಿ ದೇವಿ, ಏನಾದರೂ ಅಹಿತಕರ ಘಟನೆ ಸಂಭವಿಸಿ ತನಗೆ ಹಾಗೂ ಕುಟುಂಬದವರಿಗೆ ತೊಂದರೆಯಾದರೆ ಅದಕ್ಕೆ ಗೃಹ ಇಲಾಖೆಯೇ ಹೊಣೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಲಾಲೂಜಿ ಜೈಲಿನಲ್ಲಿದ್ದು, ಪ್ರತೀ ನಿತ್ಯ ಸಾವಿನೆಡೆಗೆ ಸಾಗುತ್ತಿದ್ದಾರೆ. ಅವರು ಮಧುಮೇಹದಿಂದ ಬಳಲುತ್ತಿದ್ದಾರೆ. ಅವರು ಕಾಯಿಲೆಯಿಂದ ಮೃತರಾಗುತ್ತಾರೋ ಅಥವಾ ಔಷದ ಬಳಸಿ ಅವರನ್ನು ಕೊಲ್ಲಲಾಗುತ್ತದೆಯೇ ಎಂಬುದು ತಿಳಿದಿಲ್ಲ. ಸರಕಾರದ ಮೇಲೆ ವಿಶ್ವಾಸವಿರಿಸಲು ಸಾಧ್ಯವಿಲ್ಲ. ಮನೆ ತೊರೆಯಬೇಕೆಂದು ಸರಕಾರ ತಿಳಿಸಿದರೆ ಹಾಗೆ ಮಾಡಲು ಸಿದ್ಧರಿದ್ದೇವೆ ಎಂದು ರಾಬ್ರಿ ಹೇಳಿದರು. ಲಾಲೂ ಅನುಪಸ್ಥಿತಿಯಲ್ಲಿ ಆರ್‌ಜೆಡಿ ಮುಖಂಡತ್ವ ವಹಿಸಿಕೊಂಡಿರುವ ಅವರ ಪುತ್ರ ತೇಜಸ್ವಿ ಯಾದವ್ ಅವರೂ ತಾಯಿಯ ಮಾತಿಗೆ ಧ್ವನಿಗೂಡಿಸಿದ್ದಾರೆ. ರಾಜ್ಯ ಸರಕಾರ ತಮ್ಮ ಕುಟುಂಬಕ್ಕೆ ನೀಡಿರುವ ಭದ್ರತೆಯನ್ನು ತ್ಯಜಿಸಲು ಸಿದ್ಧರಿದ್ದೇವೆ. ತಾಯಿಗೆ ಮಾಜಿ ಮುಖ್ಯಮಂತ್ರಿಯ ನೆಲೆಯಲ್ಲಿ, ಸಹೋದರ ತೇಜ್‌ಪ್ರತಾಪ್‌ಗೆ ಶಾಸಕನ ನೆಲೆಯಲ್ಲಿ ಹಾಗೂ ತನಗೆ ವಿಪಕ್ಷ ನಾಯಕನ ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ. ಈ ಭದ್ರತೆಯನ್ನು ತ್ಯಜಿಸಲು ನಾವು ಸಿದ್ಧರಿದ್ದೇವೆ. ಆಗಲಾದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ಷುಲ್ಲಕ ರಾಜಕೀಯ ನಡೆಸುವ ಬದಲು ಅಭಿವೃದ್ಧಿ ಕಾರ್ಯದತ್ತ ಗಮನ ನೀಡಲಿ ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ. ಸುಮಾರು 15 ಆರ್‌ಜೆಡಿ ಶಾಸಕರು ತಮಗೆ ನೀಡಲಾಗಿರುವ ಭದ್ರತೆಯನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ತಾನು ಈಗ ವಾಸಿಸುತ್ತಿರುವ ಸರಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಮುಖ್ಯಮಂತ್ರಿ ನೋಟಿಸ್ ಕಳಿಸಿದ್ದಾರೆ ಎಂದವರು ತಿಳಿಸಿದ್ದಾರೆ.

 ಆದರೆ ರಾಬ್ರಿ ದೇವಿ ಹಾಗೂ ತೇಜಸ್ವಿ ಯಾದವ್ ಆರೋಪವನ್ನು ಬಿಜೆಪಿ ಮುಖಂಡ ಶಾನವಾಝ್ ಹುಸೈನ್ ನಿರಾಕರಿಸಿದ್ದಾರೆ. ಲಾಲೂ ಪ್ರಸಾದ್ ಸುರಕ್ಷತೆಯನ್ನು ಸರಕಾರ ಖಾತರಿಪಡಿಸುತ್ತದೆ. ಈ ಬಗ್ಗೆ ಆತಂಕ ಬೇಡ. ದೋಷಿ ಎಂದು ತೀರ್ಪು ಬಂದು ಜೈಲಿಗೆ ಹೋದಾಗ ಅವರ ಭದ್ರತೆಯನ್ನು ಕಡಿಮೆ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಜೈಲಿನಲ್ಲಿ ಅಥವಾ ಆಸ್ಪತ್ರೆಯಲ್ಲಿ ಲಾಲೂ ಪ್ರಸಾದ್‌ಗೆ ಸೂಕ್ತ ಭದ್ರತೆ ಒದಗಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News