ಒಂದು ಲಕ್ಷ ರೂಪಾಯಿ ಬಂಡವಾಳಕ್ಕೆ 30 ಕೋಟಿ ರೂ. ಲಾಭ ಗಳಿಸಿತೆ ಕೇಂದ್ರ ಸಚಿವ ಗೋಯಲ್ ಕುಟುಂಬ ಉದ್ಯಮ ?

Update: 2018-04-11 13:10 GMT

ಹೊಸದಿಲ್ಲಿ, ಎ.11: ರೈಲ್ವೇ ಸಚಿವ ಪಿಯೂಷ್ ಗೋಯಲ್ ಪತ್ನಿಯ ಒಡೆತನದಲ್ಲಿರುವ ಉದ್ಯಮವೊಂದು ಒಂದು ಲಕ್ಷ ರೂ. ಬಂಡವಾಳ ಹೂಡಿ 10 ವರ್ಷದಲ್ಲಿ 30 ಕೋಟಿ ರೂ. ಲಾಭ ಗಳಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಹಿನ್ನೆಲೆಯಲ್ಲಿ ಗೋಯಲ್‌ರನ್ನು ಸಂಪುಟದಿಂದ ಉಚ್ಛಾಟಿಸಿ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಪಿಯೂಷ್ ಗೋಯಲ್ ಅವರ ಹುದ್ದೆಯ ಪ್ರಭಾವದಿಂದ ಅವರ ಪತ್ನಿ ಸೀಮಾ ಗೋಯಲ್ ಒಡೆತನದ ಇಂಟರ್‌ಕಾನ್ ಅಡ್ವೈಸರ್ಸ್ ಪ್ರೈ.ಲಿ. ಎಂಬ ಸಂಸ್ಥೆ 30 ಕೋಟಿ ರೂ. ಲಾಭ ಗಳಿಸಿದೆ. ಕಂಪೆನಿಯ 10,000 ಶೇರುಗಳು ತಲಾ 30,000 ಗಳಿಕೆ ಮಾಡಿವೆ. ಇದರಲ್ಲಿ ಸೀಮಾ ಗೋಯಲ್ 9,999 ಶೇರುಗಳನ್ನು ಹಾಗೂ ಅವರ ಪುತ್ರ ಧ್ರುವ್ ಗೋಯಲ್ ಒಂದು ಶೇರು ಹೊಂದಿದ್ದಾರೆ. ಇದು ಶೇ.100ರಷ್ಟು ಕುಟುಂಬದ ಮಾಲಕತ್ವ ಹೊಂದಿರುವ ಸಂಸ್ಥೆ. ಈ ಹಿಂದೆ ಪಿಯೂಷ್ ಗೋಯೆಲ್ ಸಂಸ್ಥೆಯ ಸಹ ಮಾಲಕರಾಗಿದ್ದರು. ಆದರೆ 2014 ರ ಮೇ 13ರಂದು ಸಚಿವರಾಗಿ ಆಯ್ಕೆಯಾದ ಬಳಿಕ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ತಿಳಿಸಿದ್ದಾರೆ.    

 2007ರಿಂದ 2009ರವರೆಗೆ ಹಾಗೂ 2015ರಿಂದ 2017ರವರೆಗೆ ಪಿಯೂಷ್ ಗೋಯಲ್ ಮತ್ತು ಕುಟುಂಬ ಸಂಸ್ಥೆಯ ಆದಾಯ ಮೂಲದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲ್ಲ. ಕೇವಲ ಆರ್ಥಿಕ ಸಲಹೆ ಎಂದು ಮಾತ್ರ ತಿಳಿಸಲಾಗಿದೆ. ಮೋದಿ ಸರಕಾರದ ಸ್ವಯಂ ಘೋಷಿತ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಪ್ರಾಮಾಣಿಕತೆಯ ನಕಲಿತನ ಇದೀಗ ಬಹಿರಂಗಗೊಂಡಿದೆ. ಹಿತಾಸಕ್ತಿಯ ಸಂಘರ್ಷ, ಬ್ಯಾಂಕ್ ಸಾಲದ ಹಗರಣ ಇತ್ಯಾದಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಗೋಯಲ್ ಪ್ರಕರಣದಲ್ಲಿ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ವೌನ ವಹಿಸಿರುವುದೇಕೆ ಎಂದು ಖೇರಾ ಪ್ರಶ್ನಿಸಿದ್ದಾರೆ. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಗೋಯಲ್ ಕುಟುಂಬದ ಉದ್ಯಮ ಗಳಿಸಿರುವ ಆದಾಯವನ್ನು ಕಾಂಗ್ರೆಸ್ ತಪ್ಪಾಗಿ ಬಿಂಬಿಸುತ್ತಿದೆ. ಓರ್ವ ಪ್ರಮುಖ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಗೋಯಲ್ ಆರ್ಥಿಕ ಸಲಹೆಗಾರನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರು ಸಚಿವರಾದ ಬಳಿಕ ಈ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆರ್ಥಿಕ ಸಲಹೆಯ ಕಾರ್ಯ ನಿರ್ವಹಿಸಿ ಸಂಸ್ಥೆ ಗಳಿಸಿರುವ ಆದಾಯದ ಮೂಲವನ್ನು ಸರಿಯಾಗಿಯೇ ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

 ಕಾಂಗ್ರೆಸ್ ಪಕ್ಷದ ಮುಖಂಡರು ನಡೆಸಿರುವ ಹಗರಣಗಳ ಬಗ್ಗೆ ನಡೆಯುತ್ತಿರುವ ತನಿಖೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ತಂತ್ರಗಾರಿಕೆ ನಡೆಸುವುದು ಕಾಂಗ್ರೆಸ್‌ನ ಜಾಯಮಾನವಾಗಿದೆ ಎಂದು ಬಿಜೆಪಿ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News