ಒಪ್ಪಿಗೆಯಿಲ್ಲದೆ ಮದುವೆ: ಕರ್ನಾಟಕದ ಮಹಿಳೆಗೆ ರಕ್ಷಣೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2018-04-11 13:54 GMT

ಹೊಸದಿಲ್ಲಿ,ಎ.11: ತನ್ನ ಒಪ್ಪಿಗೆಯಿಲ್ಲದೆ ತನ್ನ ಮದುವೆಯನ್ನು ಮಾಡಲಾಗಿದೆ ಎಂದು ಆರೋಪಿಸಿರುವ ಕರ್ನಾಟಕದ ಮಹಿಳೆಯೋರ್ವಳಿಗೆ ರಕ್ಷಣೆಯನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಸದ್ಯ ದಿಲ್ಲಿಯಲ್ಲಿದ್ದು ದಿಲ್ಲಿ ಮಹಿಳಾ ಆಯೋಗದ ನೆರವು ಪಡೆದುಕೊಂಡಿರುವ ಈ ಮಹಿಳೆ, ಹಿಂದು ವಿವಾಹ ಕಾಯ್ದೆಯಲ್ಲಿ ವಧು ಅಥವಾ ವರನ ಸಮ್ಮತಿಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿಲ್ಲ. ಆದ್ದರಿಂದ ಕಾಯ್ದೆಯಲ್ಲಿನ ಕೆಲವು ನಿಯಮಗಳನ್ನು ರದ್ದುಗೊಳಿಸಬೇಕು ಎಂದೂ ಕೋರಿದ್ದಾಳೆ.

ಮಹಿಳೆಯ ಅರ್ಜಿಯನ್ನು ಹೇಬಿಯಸ್ ಕಾರ್ಪಸ್ ಅರ್ಜಿಯನ್ನಾಗಿ ಪರಿಗಣಿಸುವುದಾಗಿ ತಿಳಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಮಹಿಳೆಯ ಪರ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಕೋರಿರುವಂತೆ ಕಾಯ್ದೆಯ ಕೆಲವು ನಿಯಮಗಳ ಸಂವಿಧಾನಬದ್ಧತೆಯ ಬಗ್ಗೆ ತಾನು ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿತು.

ಬಲವಂತದಿಂದ ಅಥವಾ ಮೋಸದಿಂದ ಸಮ್ಮತಿ ಪಡೆದುಕೊಂಡಿದ್ದರೆ ಅಂತಹ ಮದುವೆಯನ್ನು ರದ್ದುಗೊಳಿಸಲು ಕಾಯ್ದೆಯ ಕಲಂ 12ಸಿ ಅವಕಾಶ ಕಲ್ಪಿಸಿದೆ ಎಂದು ಪೀಠವು ಬೆಟ್ಟುಮಾಡಿತು.

ಮಹಿಳೆಗೆ ಬಲವಂತದಿಂದ ಮದುವೆ ಮಾಡಲಾಗಿದೆ ಮತ್ತು ಆಕೆ ರಕ್ಷಣೆಯನ್ನು ಬಯಸಿದ್ದಾಳೆ ಎಂದು ಜೈಸಿಂಗ್ ಪೀಠಕ್ಕೆ ತಿಳಿಸಿದರು.

ಮಹಿಳೆಯ ಮತ್ತು ಬಲವಂತದಿಂದ ಮದುವೆಯನ್ನು ಮಾಡಿರುವ ಆಕೆಯ ಕುಟುಂಬದ ಗುರುತನ್ನು ಬಹಿರಂಗಗೊಳಿಸಬಾರದು ಎಂಬ ಮನವಿಯನ್ನು ಒಪ್ಪಿಕೊಂಡ ಪೀಠವು, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸಂಬಂಧಿಸಿದ ಎಸ್‌ಪಿಗೆ ನಿರ್ದೇಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಮೇ 5ಕ್ಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News